ಮಲ್ಲಿಕಾರ್ಜುನ ಸಿದ್ದಣ್ಣವರ
ಈ ಪ್ರಯತ್ನದ ಭಾಗವಾಗಿ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರಿಗೆ ಇದೇ ಫೆ.14 ರಂದು ಪತ್ರ ಬರೆದು, ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಬಂದಿರುವ ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಗೋವಾದಲ್ಲಿನ ಕರ್ನಾಟಕದ ವಲಸೆ ಕಾರ್ಮಿಕರ ದುಃಸ್ಥಿತಿ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ಬಂದಿದೆ. ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕನ್ನಡಿಗರಿಗೆ ಉಂಟಾಗುತ್ತಿರುವ ತೊಂದರೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.ಗೋವಾ ಮತ್ತು ಕರ್ನಾಟಕಕ್ಕೆ ಸಾಂಸ್ಕೃತಿಕ ಬಂಧವಿದೆ. ಎರಡೂ ರಾಜ್ಯಗಳು ಆತಿಥ್ಯಕ್ಕೆ ಹೆಸರಾಗಿವೆ. ಜನರ ಜೀವನಕ್ಕೆ ಮೂಲ ಅವಶ್ಯಕತೆಗಳಾದ ಉದ್ಯೋಗ, ಪಡಿತರ ವ್ಯವಸ್ಥೆ, ಆರೋಗ್ಯ ಸೌಲಭ್ಯ, ಸೂರು, ರಕ್ಷಣೆ ಸೇರಿದಂತೆ ಇತರ ಸಾಮಾಜಿಕ ಸೌಲಭ್ಯಗಳನ್ನು ಕರ್ನಾಟಕದ ವಲಸೆ ಕಾರ್ಮಿಕರಿ ನೀಡುವಂತೆ ಸಚಿವ ಲಾಡ ಪತ್ರದಲ್ಲಿ ವಿನಂತಿಸಿದ್ದಾರೆ.
ಜಗತ್ತಿನಾದ್ಯಂತ ಮತ್ತೆ ಆರ್ಥಿಕ ಹಿಂಜರಿತದ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಉದ್ಯೋಗಗಳು ಬೇರೆಯವರ ಪಾಲಾಗಬಾರದು ಮತ್ತು ಈಗಾಗಲೇ ಉದ್ಯೋಗ ಕಿತ್ತುಕೊಂಡಿರುವ ವಲಸಿಗರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲ ರೀತಿಯಿಂದ ಗೋವನ್ನಿಗೆ ಪೈಪೋಟಿ ಒಡ್ಡುತ್ತಿರುವ ಕನ್ನಡಿಗರನ್ನು ಆಯಾ ಕೆಲಸಗಳಿಂದ ಹೊರಹಾಗುವ, ಅವರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯುವ ಕಾರ್ಯ ಗೋವಾದಲ್ಲೀಗ ಬಿರುಸಿನಿಂದ ನಡೆಯುತ್ತಿದೆ.
ಸಿಂಧ್ಯ, ಎಚ್ಕೆ, ಖರ್ಗೆ, ಲಾಡ್
"ಕನ್ನಡಪ್ರಭ " ಬಯಲಿಗೆಳೆದ ಈ ದುರಂತ ವರದಿಗೆ ಸ್ಪಂಧಿಸಿದ ಕರ್ನಾಟಕ ಸರ್ಕಾರ ಆಗ ತನ್ನ ಪ್ರತಿನಿಧಿಗಳನ್ನಾಗಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯ ಮತ್ತು ಎಚ್.ಕೆ.ಪಾಟೀಲ್ ಅವರನ್ನು ಗೋವೆಗೆ ಕಳಿಸಿತ್ತು. ಸಿಂಧ್ಯ-ಎಚ್ಕೆ ಮಾತುಕತೆ ನಡೆಸುವ ಮೂಲಕ ವಲಸಿಗ ಕನ್ನಡಿಗರಿಗೆ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಅಂದಿನ ಕೆಂದ್ರ ಸರ್ಕಾರ ಕೂಡ ಈ ಸಮಸ್ಯೆಗೆ ಸ್ಪಂದಿಸಿ ಗೋವಾ ಸರ್ಕಾರಕ್ಕೆ ಕಿವಿಮಾತು ಹೇಳಿತ್ತು.
2008 ರಲ್ಲಿ ವಾಸ್ಕೋದ ಬಿರ್ಲಾ ರಸಗೊಬ್ಬರ ಕಾರ್ಖಾನೆ ಆಡಳಿತ ಮಂಡಳಿ ಗೋವಾ ಸರ್ಕಾರ ಆಣತಿಯಂತೆ 800 ಕನ್ನಡಿಗ ಕಾರ್ಮಿಕರನ್ನು ಏಕಕಾಲಕ್ಕೆ ವಜಾಗೊಳಿಸಿತ್ತು. ಆಗಲೂ ಕನ್ನಡಪ್ರಭ ಈ ಘಟನೆಯ ಮೇಲೆ ಬೆಳಕು ಚೆಲ್ಲುವ ವಿಸ್ತೃತ ವರದಿ ಮಾಡಿತ್ತು. ಅಂದು ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರು ಈ ವರದಿ ಗಮನಿಸಿ ಬಿರ್ಲಾ ಕಂಪೆನಿ ಮತ್ತು ಗೋವಾ ಸರ್ಕಾರದೊಂದಿಗೆ ಮಾತನಾಡಿ ವಜಾಗೊಂಡ ಕನ್ನಡಿಗ ಕಾರ್ಮಿಕರನ್ನು ವಾಪಸ್ ಸೇವೆಗೆ ಸೇರುವಂತೆ ಮಾಡಿದ್ದರು.
ಈಗ ಇಂಥದೇ ಪ್ರಯತ್ನ ಸಚಿವ ಸಂತೋಷ್ ಲಾಡ್ ಅವರಿಂದ ಆಗಿದೆ.