ಬೆಂಗಳೂರು : ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ತಾಕಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬಾಲಕ ಬಸ್‌ನ ಚಕ್ರದಡಿಗೆ ಸಿಲುಕಿ ರಸ್ತೆಗೆ ಉಜ್ಜಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.
ಜಿ.ಎಂ. ಪಾಳ್ಯದ ದಿವಂಗತ ದಿಲೀಪ್ ಕುಮಾರ್ ಮತ್ತು ಸೂರ್ಯ ಕಲಾ ದಂಪತಿ ಪುತ್ರ ಶಬರೀಶ್(11) ಮೃತ ದುರ್ದೈವಿ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮೃತನ ಚಿಕ್ಕಪ್ಪ ಸುನೀಲ್ ಕುಮಾರ್ ಮತ್ತು ಅವರ 10 ವರ್ಷದ ಪುತ್ರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಭಾನುವಾರ ಸಂಜೆ ಸುಮಾರು 5.15 ಗಂಟೆಗೆ ಸಿ.ಟಿ. ಮಾರ್ಕೆಟ್ ಕಡೆಯಿಂದ ಎಸ್‌ಜೆ ಪಾರ್ಕ್ ರಸ್ತೆಯಲ್ಲಿ ಪುರಭವನದ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುವಾಗ ಈ ದುರ್ಘಟನೆ ನಡೆದಿದೆ.
ಚಿಕ್ಕಪ್ಪನ ಜತೆಗೆ ಬಂದಿದ್ದ ಬಾಲಕ:
ಸುನೀಲ್ ಕುಮಾರ್ ಅವರು ತಮ್ಮ ಪುತ್ರಿ ಹಾಗೂ ಸಹೋದರನ ಪುತ್ರ ಶಬರೀಶ್‌ನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಸಿ.ಟಿ. ಮಾರ್ಕೆಟ್‌ಗೆ ಬಂದಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೊರಟಿದ್ದರು. ಮಾರ್ಗ ಮಧ್ಯೆ ಎಸ್.ಜೆ. ಪಾರ್ಕ್ ರಸ್ತೆಯಲ್ಲಿ ಬರುವಾಗ ಹಿಂದಿನಿಂದ ಬಂದ ಕೆಎ 57 ಎಫ್ 6456 ನೋಂದಣಿ ಸಂಖ್ಯೆಯ ಬಿಎಂಟಿಸಿ ದ್ವಿಚಕ್ರ ವಾಹನಕ್ಕೆ ತಾಕಿದೆ. ಪರಿಣಾಮ ನಿಯಂತ್ರಣ ತಪ್ಪಿ ಮೂವರು ಸವಾರರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಶಬರೀಶ್ ಬಲ ಭಾಗಕ್ಕೆ ಬಿದ್ದ ಪರಿಣಾಮ ಬಸ್‌ನ ಎಡಭಾಗದ ಹಿಂಬದಿ ಚಕ್ರ ಸಿಲುಕಿ ರಸ್ತೆಗೆ ಉಜ್ಜಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಲಕ, ನಿರ್ವಾಹನ ಹಿಡಿದು ಪೊಲೀಸಿಗೆ ಒಪ್ಪಿಸಿದ ಜನ:
ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಬಳಿಕ ಪರಾರಿಯಾಗಲು ಮುಂದಾದ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಠಾಣೆ ಮುಂದೆ ಪ್ರತಿಭಟನೆ
ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ಎದುರು ಜಮಾಯಿಸಿ, ನ್ಯಾಯ ಕೊಡಿಸಬೇಕು. ಬಿಎಂಟಿಸಿ ಬಸ್ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮೂರು ದಿನದ ಹಿಂದಷ್ಟೇ ಬಾಲಕಿ ಬಲಿ
ದ್ವಿಚಕ್ರ ವಾಹನದಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ 10 ವರ್ಷ ಬಾಲಕಿ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದು ಆ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕಳೆದ ಗುರುವಾರ(ಆ.21) ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನಗರದಲ್ಲಿ ನಡೆದಿತ್ತು. ಕೋಗಿಲು ಕ್ರಾಸ್ ನಿವಾಸಿ ತನ್ನಿಕೃಷ್ಣ(10) ಮೃತಪಟ್ಟಿದ್ದಳು. ಈ ಘಟನೆಯಾದ ಮೂರೇ ದಿನಕ್ಕೆ 11 ವರ್ಷ ಶಬರೀಶ್ ಬಿಎಂಟಿಸಿ ಬಸ್‌ಗೆ ಬಲಿಯಾಗಿದ್ದಾನೆ.