ಕಾರವಾರ: ಯಾವುದೇ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಇನ್ನು ಎಂಟೂವರೆ ವರ್ಷ ನಮ್ಮ ಸರ್ಕಾರ ಆಡಳಿತ ಮಾಡಲಿದೆ. ಬಿಜೆಪಿಯವರು ಪ್ರತಿಭಟನೆ ಮಾಡಿ, ನಮ್ಮ ಸರ್ಕಾರ ಬಡವರಿಗೆ ಮಾಡುತ್ತಿರುವ ಸಹಾಯದ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗುರುವಾರ ಮುರ್ಡೇಶ್ವರದಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.ಕಾಂಗ್ರೆಸ್ ಶಾಸಕರೇ ತಮಗೆ ಹಣ ನೀಡುವಂತೆ ಸಿಎಂ ಬಳಿ ಬೇಡಿಕೆ ಇಡುತ್ತಿದ್ದಾರೆ ಎಂಬ ವಿಜಯೇಂದ್ರ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ವಿಜಯೇಂದ್ರ ತಮ್ಮ ಲೋಪ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್ ಅವರು ಸರ್ಕಾರ ಕೆಡವಿ ಸಿಎಂ ಆಗಲು ಒಂದು ಸಾವಿರ ಕೋಟಿ ಸಿದ್ಧ ಮಾಡಿಕೊಂಡಿದ್ದಾರೆ ಎಂದು ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ.
ವಿಜಯೇಂದ್ರ ತಮ್ಮದೇ ಕೇಂದ್ರ ಗೃಹಮಂತ್ರಿಗೆ ಪತ್ರ ಬರೆದು ಈ ಬಗ್ಗೆ ಇಡಿ, ಸಿಬಿಐನಿಂದ ತನಿಖೆ ಮಾಡಿಸಲಿ. ಇದೆಲ್ಲವನ್ನು ಮುಚ್ಚಿಕೊಳ್ಳಲು ವಿಜಯೇಂದ್ರ ಈ ರೀತಿ ಹೇಳುತ್ತಿದ್ದಾರೆ ಎಂದರು.ನಮ್ಮ ಸರ್ಕಾರ ಇರುವಾಗಲೇ ಆದಷ್ಟು ಬೇಗ ಕಾಂಗ್ರೆಸ್ ಕಚೇರಿ ಕಟ್ಟಿಕೊಳ್ಳಿ, ಸದ್ಯದ ಪರಿಸ್ಥಿತಿ ನೋಡಿದರೆ ದುಃಖವಾಗುತ್ತಿದೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರ ಹೇಳಿಕೆ ಹಿಂದೆ ಬೇರೆ ಲೆಕ್ಕಾಚಾರ ಇದೆ.
ಬಿಜೆಪಿ ಅವಧಿಯಲ್ಲಿ ಅವರಿಗೆ ಬೇಕಾದ ಸಂಸ್ಥೆಗಳಿಗೆ ಬೇಕಾದ ರೀತಿಯಲ್ಲಿ ಕಚೇರಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಈ ವರ್ಷ ನೂರು ಕಡೆ ಪಕ್ಷದ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರವಾಗಿ ಪರಮೇಶ್ವರ್ ಅವರು ಮಾತನಾಡಿದ್ದಾರೆ ಎಂದರು.ಕರಾವಳಿ ಭಾಗದಲ್ಲಿ ಉತ್ತಮ ಪರಿಸರ, ಸಮುದ್ರ, ಕೌಶಲ್ಯಯುತ ಮಾನವ ಸಂಪನ್ಮೂಲವಿದ್ದು, ಈ ಭಾಗದ ಜನ ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೀನುಗಾರರು ಸೇರಿದಂತೆ ಕರಾವಳಿ ಭಾಗದ ಎಲ್ಲ ವರ್ಗದವರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ಆಸ್ತಿ ಹೊಂದಿದ್ದರೂ ಅದನ್ನು ಮಾರಿಕೊಂಡು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಅತ್ಯುತ್ತಮವಾದ ಸಂಪನ್ಮೂಲಗಳಿವೆ. ವಲಸೆ ತಪ್ಪಿಸಿ ಈ ಭಾಗದಲ್ಲೇ ಈ ಜನ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಹಂತ- ಹಂತವಾಗಿ ಜಾರಿಗೆ ತರುತ್ತಿದ್ದೇವೆ ಎಂದರು.
ಡಿಕೆಶಿ, ದೇಶಪಾಂಡೆ ಗುಸುಗುಸು!
ಭಟ್ಕಳ: ಭಟ್ಕಳದ ಬೇಂಗ್ರೆ ಗಾಲ್ಫ್ ಮೈದಾನದಲ್ಲಿ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಹಿರಿಯ ನಾಯಕ, ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಅವರ ಗುಸುಗುಸು ಎಲ್ಲರ ಗಮನ ಸೆಳೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಡಿಸಿಎಂ ಮತ್ತು ದೇಶಪಾಂಡೆ ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಇವರಿಬ್ಬರೂ ನಾಯಕರು ಏನು ಚರ್ಚೆ ಮಾಡಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶಿವರಾಮ ಹೆಬ್ಬಾರ ನಮ್ಮವರೇ ಎಂದು ಡಿಕೆಶಿ!
ಉತ್ತರ ಕನ್ನಡ ಜಿಲ್ಲೆಯಲ್ಲಿನ ಆರು ಶಾಸಕರ ಪೈಕಿ ಐದು ಮಂದಿ ಶಾಸಕರು ನಮ್ಮವರೇ ಆಗಿದ್ದಾರೆ. ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ ಅವರೂ ನಮ್ಮವರೇ ಎಂದು ಶಿವರಾಮ ಹೆಬ್ಬಾರ ಹೆಸರು ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಐವರೂ ಶಾಸಕರೂ ನಮಗೆ ಬಲ ತಂದಿದ್ದಾರೆ. ನನ್ನ ಕೈ ಬಲಪಡಿಸಿದ್ದಾರೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಅವರು ಇಡಗುಂಜಿಯಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಅವರನ್ನು ಭೇಟಿಯಾಗಿ ಆದರಿಂದ ಬರಮಾಡಿಕೊಂಡಿದ್ದಾರೆ. ಅದರಂತೆ ಅವರು ಜತೆಗೆ ಮುರುಡೇಶ್ವರ, ಮತ್ಸ್ಯಮೇಳ ಕಾರ್ಯಕ್ರಮಕ್ಕೂ ಡಿಕೆಶಿ ಜತೆಗೇ ಆಗಮಿಸಿದ್ದರು.