ಸಕಲೇಶಪುರಕ್ಕೆ ಮತ್ತೊಂದು ತಾಯಿಮಕ್ಕಳ ಆಸ್ಪತ್ರೆ ಯೋಗ

KannadaprabhaNewsNetwork |  
Published : Oct 23, 2026, 01:30 AM IST
22ಎಚ್ಎಸ್ಎನ್3 : 1926 ರಲ್ಲಿ ಭ್ರೀಟಿಷರಿಂದ ನಿರ್ಮಾಣಗೊಂಡಿರುವ ತಾಯಿ ಮಕ್ಕಳ ಆಸ್ಪತ್ರೆ. | Kannada Prabha

ಸಾರಾಂಶ

ಸಂಪೂರ್ಣ ಮಲೆನಾಡು ಪ್ರದೇಶ ಹೊಂದಿರುವ ತಾಲೂಕಿನಲ್ಲಿ ಕಾಫಿ ತೋಟಗಳದ್ದೆ ಸಾಮ್ರಾಜ್ಯ. ಇಂತಹ ಊರನ್ನು ಬ್ರೀಟಿಷರು 1920ರ ದಶಕದಲ್ಲಿ ಉಪವಿಭಾಗವನ್ನಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಲ್ಲದೆ ತಾಲೂಕಿನಲ್ಲೆ ಮೊದಲ ಬಾರಿಗೆ 1926ರಲ್ಲೇ ಪಟ್ಟಣದ ಹೃದಯಭಾಗದಲ್ಲಿ ಅಂದರೆ ಹಳೇಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಸುಮಾರು 1.16 ಎಕರೆ ಪ್ರದೇಶದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿದ್ದರು. ಅಲ್ಲದೆ ತಾಲೂಕು ಆರೋಗ್ಯಾಧಿಕಾರಿ ನಿವಾಸ ಸೇರಿದಂತೆ ಸಿಬ್ಬಂದಿಯ ವಾಸಕ್ಕೆ ಮನೆಗಳನ್ನು ಬ್ರಿಟೀಷ್ ಶೈಲಿಯಲ್ಲಿ ನಿರ್ಮಿಸುವ ಮೂಲಕ ಅಂದಿನ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಯತ್ನ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದಲ್ಲಿ ನೂರು ವರ್ಷಗಳ ನಂತರ ಮತ್ತೊಂದು ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ.

ಸಂಪೂರ್ಣ ಮಲೆನಾಡು ಪ್ರದೇಶ ಹೊಂದಿರುವ ತಾಲೂಕಿನಲ್ಲಿ ಕಾಫಿ ತೋಟಗಳದ್ದೆ ಸಾಮ್ರಾಜ್ಯ. ಇಂತಹ ಊರನ್ನು ಬ್ರೀಟಿಷರು 1920ರ ದಶಕದಲ್ಲಿ ಉಪವಿಭಾಗವನ್ನಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಲ್ಲದೆ ತಾಲೂಕಿನಲ್ಲೆ ಮೊದಲ ಬಾರಿಗೆ 1926ರಲ್ಲೇ ಪಟ್ಟಣದ ಹೃದಯಭಾಗದಲ್ಲಿ ಅಂದರೆ ಹಳೇಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಸುಮಾರು 1.16 ಎಕರೆ ಪ್ರದೇಶದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿದ್ದರು. ಅಲ್ಲದೆ ತಾಲೂಕು ಆರೋಗ್ಯಾಧಿಕಾರಿ ನಿವಾಸ ಸೇರಿದಂತೆ ಸಿಬ್ಬಂದಿಯ ವಾಸಕ್ಕೆ ಮನೆಗಳನ್ನು ಬ್ರಿಟೀಷ್ ಶೈಲಿಯಲ್ಲಿ ನಿರ್ಮಿಸುವ ಮೂಲಕ ಅಂದಿನ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಯತ್ನ ನಡೆಸಿದ್ದರು.

ಸುಮಾರು ಎರಡೂವರೆ ದಶಕಗಳ ಕಾಲ ತಾಯಿ ಮಕ್ಕಳ ಆಸ್ಪತ್ರೆ ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ ನಂತರ 1948ರಲ್ಲಿ ನಿವೃತ್ತ ಸೇನಾಧಿಕಾರಿ ಕ್ರಾಫರ್ಡ್‌ ಅವರು ಬ್ರೀಟಿಷ್ ಶೈಲಿಯ ಬೃಹತ್ ಕಟ್ಟಡವನ್ನು ನಿರ್ಮಿಸುವ ಮೂಲಕ ತಾಯಿ ಮಕ್ಕಳ ಆಸ್ಪತ್ರೆಯನ್ನು ಇಂದಿನ ಕ್ರಾಫರ್ಡ್ ಆಸ್ಪತ್ರೆಗೆ ವರ್ಗಾಯಿಸಿದ್ದರು. ಅಂದಿನಿಂದ ತಾಯಿ ಮಕ್ಕಳ ಆಸ್ಪತ್ರೆ ೨೦೧೦ ರವರೆಗೆ ಕ್ರಾಫರ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ನಿವಾಸವಾಗಿ ಕಾರ್ಯನಿರ್ವಹಿಸಿತ್ತು. ತದನಂತರ ಹೊಸ ಕಟ್ಟಡಗಳು ಪಟ್ಟಣದ ಕುಶಾಲನಗರ ಬಡಾವಣೆಯ ಸಮೀಪ ತಲೆ ಎತ್ತಿದ ನಂತರ ಈ ಕಟ್ಟಡದಲ್ಲಿ ಸಿಬ್ಬಂದಿ ವಾಸಿಸುತ್ತಿದ್ದಾರೆ. ಆದರೆ, ಹೊಸ ಕಟ್ಟಡಗಳು ನಿರ್ಮಾಣಗೊಂಡ ನಂತರ ಈ ಪುರಾತನ ಕಟ್ಟಡಗಳ ನಿರ್ವಹಣೆಯನ್ನು ನಿರ್ಲಕ್ಷಿಸಿದ ಪರಿಣಾಮ ಸಾಕಷ್ಟು ವರ್ಷ ಕ್ರಾಫರ್ಡ್‌ ಆಸ್ಪತ್ರೆ ಸಿಬ್ಬಂದಿ ಸೋರುವ ಮೇಲ್ಚಾವಣಿಗೆ ಪ್ಲಾಸ್ಟಿಕ್‌ಗಳನ್ನು ಕಟ್ಟಿಕೊಂಡು ವಾಸಮಾಡಿದರೆ, ಕಟ್ಟಡಗಳಿದ್ದ ಪ್ರದೇಶ ಸಂಪೂರ್ಣ ಗಿಡಗಂಟಿಗಳ ತಾಣವಾಗಿ ಮಾರ್ಪಟ್ಟ ಕಾರಣ ಸಾಕಷ್ಟು ಸಿಬ್ಬಂದಿ ಬೇರೆಡೆ ಬಾಡಿಗೆ ಮನೆಗಳಲ್ಲಿ ವಾಸಿಸಲಾರಂಭಿಸಿದ್ದರು. ಇದರಿಂದಾಗಿ ಪಟ್ಟಣದ ಹೃದಯಭಾಗದಲ್ಲಿರುವ ಪುರಾತನ ಕಟ್ಟಡಗಳ ಸಂಕೀರ್ಣ ಪಾಳುಬಿದ್ದ ಪರಿಣಾಮ ರಾತ್ರಿ ವೇಳೆ ಇಲ್ಲಿ ಸಂಚರಿಸುವುದೇ ದುಸ್ತರ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ಒಂದೆಡೆ ಹಳೇ ಬಸ್ ನಿಲ್ದಾಣ, ಮತ್ತೊಂದೆಡೆ ಪುರಸಭೆ ಕಟ್ಟಡ, ಮಗದೊಂದು ಭಾಗದಲ್ಲಿ ಬಸವೇಶ್ವರ ರಸ್ತೆ ಇದ್ದರೂ ಈ ಪ್ರದೇಶಕ್ಕೆ ಕಾಲಿಡುವುದು ಸಾವು ಬದುಕಿನ ನಡುವೆ ಹೋರಾಟ ಮಾಡಿದಂತಹ ಪರಿಸ್ಥಿತಿ ಇತ್ತು. ಸಾಕಷ್ಟು ವರ್ಷದಿಂದ ಈ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂಬ ಕೂಗು ಸಾರ್ವಜನಿಕವಲಯದಿಂದ ಕೇಳಿ ಬರುತ್ತಿತ್ತು. ಪುರಸಭೆ ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ವಾಹನ ನಿಲುಗಡೆ ಪ್ರದೇಶವನ್ನಾಗಿ ರೂಪಿಸುವ ಪ್ರಯತ್ನ ನಡೆಸಿದರು. ಆದರೆ, ಆಸ್ಪತ್ರೆ ಆಡಳಿತ ಇದಕ್ಕೆ ಅವಕಾಶ ನೀಡದ ಕಾರಣ ದಶಕಗಳ ಕಾಲ ತಾಯಿಮಕ್ಕಳ ಆಸ್ಪತ್ರೆ ಇದ್ದ ಪ್ರದೇಶ ಪಾಳು ಬಿದ್ದಿತ್ತು. ಆದರೆ, ಸಾರ್ವಜನಿಕರ ಆಹವಾಲು ಆಲಿಸಿದ ಶಾಸಕ ಸಿಮೆಂಟ್ ಮಂಜು ಪಟ್ಟಣಕ್ಕೊಂದು ತಾಯಿ ಮಕ್ಕಳ ಆಸ್ಪತ್ರೆ ಮಂಜೂರು ಮಾಡಿಸುವ ಪ್ರಯತ್ನ ಆರಂಭಿಸಿದ್ದರು. ಇಂದಿನ ಆರೋಗ್ಯ ಸಚಿವ ಯು.ಟಿ ಖಾದರ್‌ ಸಚಿವರಾದ ದಿನವೇ ಮನವಿ ಸಲ್ಲಿಸಿದ್ದರು. ಮನವಿ ಗಂಭೀರವಾಗಿ ಸ್ವೀಕರಿಸಿದ ಸಚಿವರು, ಇತ್ತೀಚೆಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ ಅವರನ್ನು ತಾಲೂಕು ಕೇಂದ್ರಕ್ಕೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಳ ಪರಿಶೀಲನೆ ನಡೆಸಿ ಸಕಾರಾತ್ಮಕವಾಗಿ ಮಾತನಾಡಿದ್ದರಿಂದ ನೂರು ವರ್ಷಗಳ ನಂತರ ಮತ್ತೆ ಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಬಹುತೇಕ ಖಾತರಿ ಎನ್ನಲಾಗುತ್ತಿದೆ.

ಖಾಲಿ ಉಳಿದಿವೆ:

೧೨ ವೈದ್ಯರಿರುವ ಆಸ್ಪತ್ರೆಯಲ್ಲಿ ೮ ವೈದ್ಯರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಡಿ ಗ್ರೂಪ್‌ ನೌಕರರನ್ನು ಸಂಪೂರ್ಣ ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದೆ. ಅಲ್ಲದೆ ಸಾಕಷ್ಟು ಯಂತ್ರೋಪಕರಣಗಳ ಕೊರತೆ ಇದೆ. ಈ ಎಲ್ಲ ಅಂಕಿಅಂಶಗಳನ್ನು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕ್ರಾಫರ್ಡ್‌ ಆಸ್ಪತ್ರೆಯಲ್ಲಿ ಸಭೆ ನಡೆಸಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಯುವರಾಜ್ ಇಲ್ಲಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಾರೆ ಎಂದಿದ್ದರು. ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣವಾದರೂ ಇಲ್ಲಿಗೆ ಸಿಬ್ಬಂದಿಯ ನೇಮಕ ಹೇಗೆ ಮಾಡಿಕೊಳ್ಳುತ್ತಿರಾ? ಕಟ್ಟಡ ನಿರ್ಮಾಣವಾದರೆ ಸಾಕ ಎಂದು ಶಾಸಕರನ್ನು ಪ್ರಶ್ನಿಸುವ ಮೂಲಕ ಸಭೆಯಲ್ಲಿ ನಗೆಗಡಲಿಗೆ ಕಾರಣವಾದರು. ಒಟ್ಟಿನಲ್ಲಿ ನೂರು ವರ್ಷಗಳ ಬಳಿಕ ಮತ್ತೆ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ತಾಲೂಕಿನ ಜನತೆಗೆ ಒಂದು ಶುಭಸುದ್ದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ದೃಢ ಮನಸ್ಸಿನಿಂದ ಹೆಜ್ಜೆ ಇಟ್ಟರೆ ಅಸಾಧ್ಯವಾದದ್ದು ಯಾವುದೂ ಇಲ್ಲ
ಗಣ್ಯರ ಅನುಕೂಲಕ್ಕಾಗಿ ನೂತನ ಪ್ರವಾಸಿ ಮಂದಿರ ನಿರ್ಮಾಣ: ಕೆ.ಎಂ.ಉದಯ್