ಕೆ.ಎಂ. ಮಂಜುನಾಥ್
ಜ. 10ರಂದು ಬೆಳಗ್ಗೆ 11 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರು ಘೋಷಿಸಿದ್ದಾರೆ. ಈ ಬೆಳವಣಿಗೆ ಮೇಯರ್ ಪಟ್ಟ ಒಲಿಸಿಕೊಳ್ಳುವವರು ಯಾರು ಎಂಬ ಕುತೂಹಲಕ್ಕೆಡೆ ಮಾಡಿದೆ.
ಬಳ್ಳಾರಿ ಮೇಯರ್ ಆಯ್ಕೆ ಸಂಬಂಧದ ನಾಯಕರ ನಡುವಿನ ಶೀತಲ ಸಮರ ಕೊನೆಗೂ ಪಕ್ಷದ ರಾಜ್ಯಾಧ್ಯಕ್ಷರ ಸಮಕ್ಷಮದಲ್ಲಿಯೇ ಬಗೆಹರಿದಿದೆ. ಕೆಪಿಸಿಸಿ ಅಧ್ಯಕ್ಷರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಯಾವುದೇ ಅಪಸ್ವರ ಇಲ್ಲದೆ ಸಲೀಸಲಾಗಿ ನಡೆಯಲಿದೆ ಎಂಬ ವಿಶ್ವಾಸ ಮೂಡಿದೆ. ಆದರೆ, ಯಾರಿಗೆ ಮೇಯರ್ ಪಟ್ಟ ದಕ್ಕಲಿದೆ ಎಂಬುದೇ ನಿಗೂಢವಾಗಿದೆ.ಸಚಿವ- ಶಾಸಕರ ನಡುವಿನ ಪ್ರತಿಷ್ಠೆ: ತಮ್ಮದೇ ಬೆಂಬಲಿಗರ ಮೇಯರ್ ಮಾಡಲು ಪಣತೊಟ್ಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಇಬ್ಬರು ನಾಯಕರ ಪ್ರತಿಷ್ಠೆಯ ರಾಜಕೀಯ ಮೇಲಾಟಕ್ಕೆ ಕಳೆದ ನ. 28 ಹಾಗೂ ಡಿ. 19ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿತ್ತು. ಏತನ್ಮಧ್ಯೆ ತಮ್ಮದೇ ಬೆಂಬಲಿಗನನ್ನು ಮೇಯರ್ ಮಾಡಲು ಒಂದು ಗುಂಪಿನ ಸದಸ್ಯರು ರೆಸಾರ್ಟ್ ರಾಜಕೀಯ ಮಾಡಿದ್ದು ಪಕ್ಷದ ನಾಯಕರಿಗೆ ಇರಸು-ಮುರಸು ಉಂಟು ಮಾಡಿತ್ತು.
ಬರೀ 7 ತಿಂಗಳ ಅಧಿಕಾರಕ್ಕೆ ಈ ಸರ್ಕಸ್!: ಪಾಲಿಕೆಯ 39 ವಾರ್ಡ್‌ಗಳ ಪೈಕಿ 21ರಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್, 5 ಪಕ್ಷೇತರ ಸದಸ್ಯರ ಬಲದೊಂದಿಗೆ ಅಧಿಕಾರ ಹಿಡಿದಿದೆ. ಪಾಲಿಕೆಯ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡು ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಿ. ತ್ರಿವೇಣಿ ಅವರು ರಾಜೀನಾಮೆ ಸಲ್ಲಿಸಿ, ತೆರವಾದ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಆದರೆ, ಈಗ ಅಧಿಕಾರದ ಗದ್ದುಗೆ ಹಿಡಿದ ಬಳಿಕ ಸಿಗುವ ಅವಧಿಯೇ ಬರೀ 7 ತಿಂಗಳು. ಇದು ಗೊತ್ತಿದ್ದೂ ತಮ್ಮ ಬೆಂಬಲಿಗರನ್ನು ಅಧಿಕಾರದ ಗದ್ದುಗೆಗೆ ಕೂಡಿಸಲು ಕೈ ಪಕ್ಷಗಳ ನಾಯಕರ ಪ್ರತಿಷ್ಠೆಗೆ ಕಟ್ಟುಬಿದ್ದು ಎರಡು ಬಾರಿ ಚುನಾವಣೆ ಮುಂದೂಡುವಂತೆ ಮಾಡಿದ್ದು ಎಷ್ಟು ಸರಿ? ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೂ ಮುಜುಗರ ಉಂಟು ಮಾಡಿತ್ತು.