ಜ್ಞಾನಕ್ಕೆ ಮತ್ತೊಂದು ಹೆಸರು ಡಾ. ಅಂಬೇಡ್ಕರ್

KannadaprabhaNewsNetwork | Published : Apr 15, 2024 1:19 AM

ಸಾರಾಂಶ

ಶೋಷಣೆ, ಸಂಕಷ್ಟಗಳನ್ನು ಮೆಟ್ಟಿನಿಂತು ಸತತವಾಗಿ ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಅಪಾರವಾದ ಜ್ಞಾನ ಸಂಪತ್ತು ಹೊಂದಿದ್ದರು. ಪ್ರಪಂಚದ ಹಲವು ವಿಶ್ವವಿದ್ಯಾನಿಲಯಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ, ಕೇಂದ್ರಗಳನ್ನು ತೆರೆದಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿ ದೆಸೆಯಿಂದ ಬದುಕಿನ ಕೊನೆಯದಿನದವರೆಗೂ ನಿರಂತರವಾಗಿ ಅಧ್ಯಯನಶೀಲರಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜ್ಞಾನಕ್ಕೆ ಮತ್ತೊಂದು ಹೆಸರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. ನಗರದ ಪದವಿ ಬಾಲಕರ ಜೈ ಭೀಮ್ ಮೆಮೋರಿಯಲ್ ವಿದ್ಯಾರ್ಥಿನಿಲಯದ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರ ದಿನಾಚರಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ಗೆ ವಿಶ್ವ ಮನ್ನಣೆ

ಶೋಷಣೆ, ಸಂಕಷ್ಟಗಳನ್ನು ಮೆಟ್ಟಿನಿಂತು ಸತತವಾಗಿ ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಅಪಾರವಾದ ಜ್ಞಾನ ಸಂಪತ್ತು ಹೊಂದಿದ್ದರು. ಪ್ರಪಂಚದ ಹಲವು ವಿಶ್ವವಿದ್ಯಾನಿಲಯಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ, ಕೇಂದ್ರಗಳನ್ನು ತೆರೆದಿವೆ. ಇದರಿಂದ ಅಂಬೇಡ್ಕರ್ ಅವರ ಜ್ಞಾನಕ್ಕೆ ವಿಶ್ವ ಮನ್ನಣೆ ದೊರೆತಿದೆ ಎಂದು ತಿಳಿಸಿದರು.

ಹೆಚ್ಚುವಾರಿ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಮನುಷ್ಯನ ಬದುಕು, ಕಷ್ಟ-ಕೋಟಲೆ, ದೈನಂದಿನ ಜೀವನದ ಜಂಜಾಟಗಳ ಬಗ್ಗೆ ಚಿಂತಿಸಿದವರಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪ್ರಮುಖರಾಗಿದ್ದಾರೆ. ಜ್ಞಾನ, ಶಿಕ್ಷಣ ಸೇರಿದಂತೆ ಮಾನವ ಕುಲದ ಅಭ್ಯುದಯಕ್ಕೆ ವಿಶೇಷವಾಗಿ ಶ್ರಮಿಸಿದ ಅಂಬೇಡ್ಕರ್ ಅವರು ಮಹಾ ಮಾನವತಾವಾದಿಯಾಗಿದ್ದಾರೆ ಎಂದರು. ಶಿಕ್ಷಣದಿಂದಲೇ ಗುರುತಿಸಲ್ಪಟ್ಟವರು

ಡಾ.ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಗುರುತಿಸಲ್ಪಟ್ಟವರು. ವಿದ್ಯಾರ್ಥಿಗಳು, ಪೋಷಕರು ಶಿಕ್ಷಣ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಗುರಿಯೊಂದಿಗೆ ಓದಿನಡೆ ಗಮನ ನೀಡಬೇಕು. ಸಮಾಜಕ್ಕೆ ಆಸ್ತಿಯಾಗಬೇಕು. ಅಂಬೇಡ್ಕರ್ ಅವರ ಸಾಧನೆಯನ್ನು ಮಾದರಿಯಾಗಿ ಅನುಸರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅವರು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲ ಡಾ. ರಾಮಯ್ಯ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್ಪಿ ಡಿ.ಎಲ್.ನಾಗೇಶ್, ಹೆಚ್ಚುವರಿ ಎಸ್ಪಿ ರಾಜಾ ಇಮಾಮ್ ಖಾಸಿಂ, ಜಿಪಂ ಉಪಕಾರ್ಯದರ್ಶಿ ಡಾ. ಎನ್. ಭಾಸ್ಕರ್, ಎಸಿ ಡಿ.ಹೆಚ್. ಅಶ್ವಿನ್, ತಹಸೀಲ್ದಾರ್ ಅನಿಲ್, ಮುಖಂಡರು ಇದ್ದರು.

Share this article