ರಜೆಗೆ ಬಂದಿದ್ದ ಮತ್ತೊಬ್ಬ ಯೋಧ ಕರ್ತವ್ಯಕ್ಕೆ ವಾಪಸ್‌

KannadaprabhaNewsNetwork |  
Published : May 13, 2025, 01:18 AM IST
ಸೇನಾ ಯೋಧ ಬಸವಂತಪ್ಪ ಕಲ್ಲಿ ಅವರನ್ನು ಅವರ ತಾಯಿ ನಿರ್ಮಲಾ ಆರತಿ ಬೆಳಗಿ ಬೀಳ್ಕೊಟ್ಟರು | Kannada Prabha

ಸಾರಾಂಶ

ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ರಜೆಗೆ ಬಂದಿದ್ದ ಮತ್ತೋರ್ವ ಯೋಧ ತುರ್ತು ಕರೆ ಮೇರೆಗೆ ಕರ್ತವ್ಯಕ್ಕೆ ತೆರಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ರಜೆಗೆ ಬಂದಿದ್ದ ಮತ್ತೋರ್ವ ಯೋಧ ತುರ್ತು ಕರೆ ಮೇರೆಗೆ ಕರ್ತವ್ಯಕ್ಕೆ ತೆರಳಿದ್ದಾರೆ. ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದ ಯೋಧ ಬಸವಂತಪ್ಪ ರುದ್ರಪ್ಪ ಕಲ್ಲಿ ಕರ್ತವ್ಯಕ್ಕೆ ತೆರಳಿದ್ದಾರೆ. ಒಂದು ವರ್ಷದ ಹಿಂದಷ್ಟೇ ಸೇನೆ ಸೇರ್ಪಡೆಯಾಗಿರುವ ಬಸವಂತಪ್ಪ ರಾಜಸ್ಥಾನದ ಜೈಸಲ್ಮೇರ್‌ಗೆ ಕರ್ತವ್ಯಕ್ಕೆ ತೆರಳಿದರು.

ತಂದೆ ರುದ್ರಪ್ಪ ಗ್ರಾಮದಲ್ಲಿ ನೀರು ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರೆ, ತಾಯಿ ನಿರ್ಮಲಾ ಗ್ರಾಪಂ ಅಧ್ಯಕ್ಷೆ. ಇವರಿಗೆ ಬಸವಂತಪ್ಪ ಏಕೈಕ ಪುತ್ರನಾಗಿದ್ದಾನೆ. ಇತ್ತೀಚೆಗೆ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ. ಆದರೆ, ಸೇನಾಧಿಕಾರಿಗಳಿಂದ ತುರ್ತು ಕರೆ ಬಂದ ಹಿನ್ನೆಲೆ ರಜೆ ಮೊಟಕು ಗೊಳಿಸಿ ಮರಳಿ ಕರ್ತವ್ಯಕ್ಕೆ ಹಾಜರಾಗಲು ತೆರಳಿದ್ದಾನೆ. ತಾಯಿ ಸೇರಿದಂತೆ ಕುಟುಂಬದ ಸದಸ್ಯರು ಆರತಿ ಬೆಳಗಿ, ಸಿಹಿ ತಿನ್ನಿಸಿ ಜಯಶಾಲಿ ಆಗಿ ಬಾ ಎಂದು ಹೆಮ್ಮೆಯಿಂದ ದೇಶಸೇವೆಗೆ ಬೀಳ್ಕೊಟ್ಟಿದ್ದಾರೆ.

ಚಿಕ್ಕ ವಯಸ್ಸಿನಿಂದ ಸೇನೆ ಸೇರಬೇಕೆಂಬುದು ನನ್ನ ಆಸೆ ಇತ್ತು. ಕಠಿಣ ಅಭ್ಯಾಸ ಮಾಡಿ ಸೇನೆ ಸೇರಿದ್ದೇನೆ. ರಜೆ ಮೇಲೆ ಊರಿಗೆ ಬಂದಿದ್ದೆ. ಆದರೆ ಸೇನಾಧಿಕಾರಿಗಳು ಕರೆ ಮಾಡಿ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ತಕ್ಷಣ ಕರ್ತವ್ಯಕ್ಕೆ ಮರಳುವಂತೆ ಸೂಚಿಸಿದರು. ಹಾಗಾಗೀ ರಜೆ ಅರ್ಧಕ್ಕೆ ಮೊಟಕುಗೊಳಿಸಿ ಹೋಗುತ್ತಿದ್ದೇನೆ ಎಂದು ಯೋಧ ಬಸವಂತಪ್ಪ ಕಲ್ಲಿ ಹೇಳಿದರು.

ಅಪ್ಪ, ಅವ್ವ, ಅಜ್ಜಿ ಧೈರ್ಯದಿಂದ ಕೆಲಸಕ್ಕೆ ಹೋಗು, ನಿನಗೆ ವಹಿಸಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸು. ಮನೆತನ, ಊರು ಮತ್ತು ದೇಶಕ್ಕೆ ಕೀರ್ತಿ ತರುವಂತೆ ಹಾರೈಸಿ, ಆಶೀರ್ವದಿಸಿದರು. ನನಗಿದು ಮೊದಲ ಯುದ್ಧದ ಅನುಭವ. ನನಗೂ ತುಂಬಾ ಕುತೂಹಲವಿದೆ. ನಮ್ಮ ಅಮಾಯಕ ಜನರನ್ನು ಹತ್ಯೆ ಮಾಡಿರುವ ಉಗ್ರರನ್ನು ಅವರದೇ ನಾಡಿಗೆ ಹೋಗಿ ನಾವು ಸಂಹಾರ ಮಾಡುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಸ್ವಲ್ಪ ದುಃಖವಿದೆ. ಆದರೂ ಗಟ್ಟಿ ಧೈರ್ಯ ಮಾಡಿ ಮಗನನ್ನು ಖುಷಿಯಿಂದ ಕಳುಹಿಸುತ್ತಿದ್ದೇವೆ. ಮೇಲಾಧಿಕಾರಿಗಳು ಹೇಳಿದ ಕೆಲಸವನ್ನು ಒಳ್ಳೆಯ ರೀತಿಯಲ್ಲಿ ಮಾಡಿ, ಯುದ್ಧದಲ್ಲಿ ಗೆದ್ದು ಬರುವಂತೆ ಆಶೀರ್ವದಿಸಿದ್ದೇವೆ. ನಮಗೆ ಒಬ್ಬನೇ ಗಂಡು ಮಗನಿದ್ದರೂ ಅವನ ಆಸೆಯಂತೆ ದೇಶ ಸೇವೆ ಮಾಡಲು ಸೇನೆಗೆ ಕಳುಹಿಸಿದ್ದೇವೆ ಎಂದು ತಾಯಿ ನಿರ್ಮಲಾ ಕಲ್ಲಿ ಹೇಳಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು