)
ಶ್ರೀಶೈಲ ಮಠದ
ಈ ಹೇಳಿಕೆಯ ಬಳಿಕ ಕನ್ನಡಪರ ಸಂಘಟನೆಗಳು, ಕಾನೂನು ತಜ್ಞರು ಹಾಗೂ ಹಲವು ಸಾರ್ವಜನಿಕ ವಲಯದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಕಾನೂನು ವ್ಯಾಖ್ಯಾನದ ವಿಷಯವಲ್ಲ. ಕನ್ನಡಿಗರ ಸ್ವಾಭಿಮಾನ ಮತ್ತು ಗಡಿನಾಡಿನ ಅಸ್ತಿತ್ವದ ಪ್ರಶ್ನೆಯೂ ಹೌದು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.
ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಸಂವಿಧಾನದ 131ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆ ದಾಖಲಿಸಿರುವುದು ಸತ್ಯ. ಬೆಳಗಾವಿ ಸೇರಿದಂತೆ ಗಡಿ ಭಾಗಗಳ ಮೇಲೆ ಹಕ್ಕು ಸಾಧಿಸುವ ಉದ್ದೇಶದಿಂದ ಈ ದಾವೆ ಸಲ್ಲಿಸಲಾಗಿತ್ತು. ಆದರೆ ಪ್ರಕರಣ ದಾಖಲಾಗಿರುವುದರಿಂದಲೇ ಅದು ಸಂಪೂರ್ಣ ವಿಚಾರಣೆಗೆ ಸ್ವೀಕೃತವಾಗಿದೆ ಅಥವಾ ಆ ವಿಷಯದ ಬಗ್ಗೆ ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಚರ್ಚೆ ನಡೆಸಬಾರದು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಗಡಿತಜ್ಞ ಹಾಗೂ ಹಿರಿಯ ವಕೀಲ ರವೀಂದ್ರ ತೋಟಿಗೇರ ಸ್ಪಷ್ಟಪಡಿಸಿದ್ದಾರೆ.ಮೊದಲು ಈ ಪ್ರಕರಣ ವಿಚಾರಣಾರ್ಹವೇ, ಸುಪ್ರೀಂ ಕೋರ್ಟ್‌ಗೆ ಈ ವಿಷಯದಲ್ಲಿ ನ್ಯಾಯವ್ಯಾಪ್ತಿ ಇದೆಯೇ ಎಂಬ ಪ್ರಶ್ನೆಗಳು ನಿರ್ಧಾರವಾಗಬೇಕಿದೆ. ಕರ್ನಾಟಕ ಸರ್ಕಾರವೂ ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಆಕ್ಷೇಪಣೆ ಸಲ್ಲಿಸಿದೆ. ಹೀಗಿರುವಾಗ ಸುಪ್ರೀಂ ಕೋರ್ಟ್ ಪೂರ್ಣ ವಿಚಾರಣೆಗೆ ಪ್ರಕರಣ ಸ್ವೀಕರಿಸಿದೆ ಎನ್ನುವುದು ವಾಸ್ತವ ಸ್ಥಿತಿಯ ಸಂಪೂರ್ಣ ಚಿತ್ರಣವಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಪ್ರಶ್ನೆಯೂ ಇದೇ. ಮಹಾಜನ್ ವರದಿ ಕರ್ನಾಟಕದ ಪರವಾಗಿದ್ದಾಗ, ಪಾಲಿಕೆ ಸಭೆಯಲ್ಲಿ ಅದನ್ನು ಏಕೆ ಪ್ರಸ್ತಾಪಿಸಲಿಲ್ಲ? ಕರ್ನಾಟಕದ ಅಧಿಕೃತ ನಿಲುವನ್ನು ಏಕೆ ಉಲ್ಲೇಖಿಸಲಿಲ್ಲ? ಯಾವ ಕಾನೂನು ದಾಖಲೆ ಆಧರಿಸಿ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಲಾಯಿತು ಎಂಬ ಪ್ರಶ್ನೆಗಳನ್ನು ಅವರು ಮುಂದಿಟ್ಟಿದ್ದಾರೆ.
ಬಿಜೆಪಿಯೊಳಗಿನ ಭಿನ್ನಮತವೇ?: ಈ ವಿವಾದದ ರಾಜಕೀಯ ಆಯಾಮವೂ ಗಮನ ಸೆಳೆಯುತ್ತಿದೆ. ಒಂದು ಕಡೆ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ಅವರು ಬೆಳಗಾವಿ ಕರ್ನಾಟಕದಲ್ಲೇ ಇದೆ. ಅಗತ್ಯ ಬಿದ್ದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನೊಂದೆಡೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮೇಯರ್, ಉಪ ಮೇಯರ್ ಹಾಗೂ ಕನ್ನಡಪರ ಸಂಘಟನೆಗಳ ಸಭೆ ಕರೆಯುವುದಾಗಿ ಹೇಳಿದ್ದಾರೆ. ಇದು ಕನ್ನಡಪರ ಸಂಘಟನೆಗಳಲ್ಲಿ ಆಶಾಭಾವನೆ ಮೂಡಿಸಿದೆ.
ಕನ್ನಡಿಗರ ಆತ್ಮಗೌರವದ ಪ್ರಶ್ನೆ:ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ರಾಜ್ಯ ಪುನರ್‌ವಿಂಗಡಣಾ ಕಾಯ್ದೆಯ ಮೂಲಕವೇ ನಿರ್ಧಾರಗೊಂಡಿರುವ ಸಾಂವಿಧಾನಿಕ ವಾಸ್ತವ. ಆದರೂ ಪ್ರತಿಯೊಂದು ಗಡಿ ವಿವಾದದ ಸಂದರ್ಭದಲ್ಲೂ ಈ ವಿಷಯವನ್ನು ಮರುಪ್ರತಿಪಾದಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದೆ ಕಾರಣಕ್ಕೆ ಕನ್ನಡಪರ ಸಂಘಟನೆಗಳು ಪಾಲಿಕೆಯ ನಿರ್ಣಯವನ್ನು ಕೇವಲ ಆಡಳಿತಾತ್ಮಕ ಕ್ರಮವಾಗಿ ನೋಡದೆ, ಕನ್ನಡಿಗರ ಅಸ್ತಿತ್ವ ಮತ್ತು ಆತ್ಮಗೌರವದ ಪ್ರತೀಕವಾಗಿ ಪರಿಗಣಿಸುತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯದ ಪ್ರಶ್ನೆ ಈಗ ಕಾನೂನು ಚರ್ಚೆಯನ್ನೂ ಮೀರಿ ರಾಜಕೀಯ ಸಂಕಲ್ಪ, ಆಡಳಿತದ ನಿಲುವು ಮತ್ತು ಗಡಿನಾಡಿನ ಕನ್ನಡಿಗರ ಭಾವನೆಗಳ ಪರೀಕ್ಷೆಯಾಗಿ ಪರಿಣಮಿಸಿದೆ.