ಆ್ಯಂಟಿ ಕಮ್ಯುನಲ್ ಫೋರ್ಸ್ ಹಿಂದುಗಳನ್ನು ದಮನಿಸಲು ಕಾಂಗ್ರೆಸ್ ಸರ್ಕಾರದ ಹುನ್ನಾರ: ಯಶ್ಪಾಲ್ ಸುವರ್ಣ

KannadaprabhaNewsNetwork |  
Published : May 05, 2025, 12:47 AM IST
ಯಶ್ಪಾಲ್‌ | Kannada Prabha

ಸಾರಾಂಶ

ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಪರಮೇಶ್ವರ್, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ಅವರ ಒತ್ತಡಕ್ಕೆ ಮಣಿದು ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆಗೆ ಮುಂದಾಗುವ ಮೂಲಕ ಮತೀಯವಾದಿ ಶಕ್ತಿಗಳ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಆ್ಯಂಟಿ ಕಮ್ಯುನಲ್ ಫೋರ್ಸ್ ಆರಂಭಿಸುವ ಮೂಲಕ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಸುಳ್ಳು ಕೇಸು ದಾಖಲಿಸಿ ದಮನಿಸುವ ಹುನ್ನಾರ ಮಾಡಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಪರಮೇಶ್ವರ್, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ಅವರ ಒತ್ತಡಕ್ಕೆ ಮಣಿದು ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆಗೆ ಮುಂದಾಗುವ ಮೂಲಕ ಮತೀಯವಾದಿ ಶಕ್ತಿಗಳ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಗೃಹ ಸಚಿವರ ಸಭೆಯಲ್ಲಿ ಮುಸ್ಲಿಂ ಮುಖಂಡರು ಮೇಜು ಗುದ್ದಿ ಉದ್ಧಟತನ ಮೆರೆದರೂ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ. ಜಿಲ್ಲೆಗೆ ಆಗಮಿಸಿದ ಸಚಿವರೂ ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಯ ಶಾಂತಿ ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸುವ ಕನಿಷ್ಠ ಸೌಜನ್ಯ ತೋರಿಸಿಲ್ಲ.

ಈ ಹಿಂದೆ ಕರಾವಳಿ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಜಾಲವನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯಲ್ಲಿ ಡ್ರಗ್ಸ್ ನಿಯಂತ್ರಣ ವಿಶೇಷ ಘಟಕ ರಚನೆ ಬಗ್ಗೆ ಮನವಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ, ಇದೀಗ ಹಿಂದೂ ಕಾರ್ಯಕರ್ತರನ್ನು ದಮನಿಸಲು ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆಗೆ ತುದಿಗಾಲಲ್ಲಿ ನಿಂತಿದೆ. ಇದರಿಂದ ಕರಾವಳಿ ಜಿಲ್ಲೆಯನ್ನು ರಾಷ್ಟ್ರಮಟ್ಟದಲ್ಲಿ ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಿ ಕರಾವಳಿ ಜಿಲ್ಲೆಯ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಕೊಳ್ಳಿ ಇಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.ಸ್ಪೀಕರ್ ಖಾದರ್ ಅವರು ತನಿಖೆ ನಡೆಯುವ ಸಂದರ್ಭದಲ್ಲಿಯೇ ಈ ಹತ್ಯೆಯಲ್ಲಿ ಫಾಸಿಲ್ ಕುಟುಂಬಸ್ಥರ ಕೈವಾಡ ಇಲ್ಲ ಹೇಳಿಕೆ ನೀಡಿದ್ದಾರೆ. ಆದರೆ ಇದೀಗ ಫಾಸಿಲ್ ಸಹೋದರನೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ತನಿಖೆಯ ಮೇಲೆ ಪ್ರಭಾವ ಬೀರಿದ ಖಾದರ್ ರವರು ತಕ್ಷಣ ರಾಜೀನಾಮೆ ನೀಡಬೇಕು.

ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಮೇಲೆ ಜಿಲ್ಲೆಯ ಜನತೆಗೆ ಯಾವುದೇ ವಿಶ್ವಾಸ ಉಳಿದಿಲ್ಲ. ಸುಹಾಸ್ ಕೊಲೆ ಪ್ರಕರಣಕ್ಕೆ ಸಹಕಾರ ನೀಡಿದ ಬುರ್ಖಾಧಾರಿ ಮಹಿಳೆ, ಹಣಕಾಸು ಸಹಕಾರ ನೀಡಿದ ವ್ಯಕ್ತಿಗಳು ಹಾಗೂ ಆರೋಪಿಗಳಿಗೆ ನಿಷೇಧಿತ ಸಂಘಟನೆಯ ಜೊತೆ ಇರುವ ಸಂಪರ್ಕಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಪ್ರಕರಣವನ್ನು ಪ್ರವೀಣ್ ನೆಟ್ಟಾರ್ ಪ್ರಕರಣದ ರೀತಿಯಲ್ಲಿ ಎನ್.ಐ.ಎ. ತನಿಖೆಗೆ ರಾಜ್ಯ ಸರ್ಕಾರ ತಕ್ಷಣ ಹಸ್ತಾಂತರಿಸ ಬೇಕು ಎಂದು ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ