ಚಾಮರಾನಗರದಲ್ಲಿ ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯ ವಿರುದ್ಧ ಕ್ರಮಕ್ಕೆ ಭ್ರಷ್ಟಾಚಾರ ವಿರೋಧಿ ವೇದಿಕೆ ಆಗ್ರಹ

KannadaprabhaNewsNetwork |  
Published : Jun 10, 2024, 12:30 AM IST
9ಸಿಎಚ್‌ಎನ್‌53 ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಅಧ್ಯಕ್ಷ ಯರಗಂಬಳ್ಳಿ ಪರಶಿವಮೂರ್ತಿ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯ ಅಕ್ರಮಗಳ ವಿರುದ್ಧ ಕ್ರಮಕೊಳ್ಳದಿದ್ದರೆ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಪರಶಿವಮೂರ್ತಿ ಎಚ್ಚರಿಸಿದರು. ಚಾಮರಾಹನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷರ ಎಚ್ಚರಿಕೆ । ಇಲಾಖೆಯಲ್ಲಿನ ಅಕ್ರಮಗಳ ದಾಖಲೆ ಸಹಿತ ಲೋಕಾಕ್ಕೆ ದೂರುಕನ್ನಡಪ್ರಭ ವಾರ್ತೆ ಚಾಮರಾಜನಗರ

ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯ ಅಕ್ರಮಗಳ ವಿರುದ್ಧ ಕ್ರಮಕೊಳ್ಳದಿದ್ದರೆ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಪರಶಿವಮೂರ್ತಿ ಎಚ್ಚರಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಹಾಸ್ಟೆಲ್ ಮತ್ತು ಕಚೇರಿಗಳಲ್ಲಿ ಹೊರಗುತ್ತಿಗೆ ನೌಕರರು ಸರಿಸುಮಾರು 200 ಕ್ಕೂ ಹೆಚ್ಚು ಮಹಿಳೆ ಮತ್ತು ಪುರುಷರು ಕಳೆದ ಹತ್ತಾರು ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ, ಈ ಹಿಂದಿನ ಏಜೆನ್ಸಿಗಳು ನೌಕರರಿಗೆ ಸಕಾಲದಲ್ಲಿ ಸರಿಯಾಗಿ ವೇತನ, ಇ.ಎಸ್.ಐ ಮತ್ತು ಪಿ.ಎಫ್ ನೀಡಿ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಿರುತ್ತಾರೆ, ಆದರೆ 2022 ರಿಂದ ಕಾಂತಿ ಏಜೆನ್ಸಿ ಮೈಸೂರು ಎಂಬುವವರು ಟೆಂಡರ್ ವಹಿಸಿಕೊಂಡ ನಂತರ ಅನಗತ್ಯ ತೊಂದರೆ ಸೃಷ್ಟಿಸಿ ನೌಕರರಿಗೆ ಸರಿಯಾಗಿ ವೇತನ ನೀಡದೆ ಇರುವುದು ಅತ್ಯಂತ ಖಂಡನೀಯವಾಗಿ ಎಂದು ಆರೋಪಿಸಿದರು.

ಜಿಲ್ಲೆಯ ಕೆಲಗುತ್ತಿಗೆ ನೌಕರರು ತಮಗೆ ಬರಬೇಕಾದ ಇ.ಎಸ್.ಐ ಮತ್ತು ಪಿ.ಎಫ್ ಕೊಡಿಸಿಕೊಡುವಂತೆ ನಮ್ಮ ವೇದಿಕೆಗೆ ಮನವಿ ಮಾಡಿದ್ದಾರೆ, ಈ ಬಗ್ಗೆ ಕೆಲ ನೌಕರರ ಪಾಸ್ ಪುಸ್ತಕ ಮತ್ತು ಇ.ಎಸ್.ಐ ಮತ್ತು ಪಿ.ಎಫ್ ಗೆ ಸಂಬಂಧಿಸಿದ ಇಂಟರ್ನೆಟ್ ದಾಖಲೆ ಪರಿಶೀಲಿಸಲಾಗಿ ಏಜೆನ್ಸಿಯವರು ಆಯಾ ನೌಕರರ ಇ.ಎಸ್.ಐ ಮತ್ತು ಪಿ.ಎಫ್ ಖಾತೆಗೆ ಕೆಲ ತಿಂಗಳು ಹಣ ಪಾವತಿಸದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ, ಈ ಬಗ್ಗೆ ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೂ ಸೂಕ್ತ ಕ್ರಮವಹಿಸಿ ಅನ್ಯಾಯಕ್ಕೊಳಗಾಗಿರುವ ನೌಕರರಿಗೆ ನ್ಯಾಯ ದೊರಕಿಸಿಕೊಡುವಂತೆ ನಮ್ಮ ವೇದಿಕೆ ವತಿಯಿಂದ ಕಳೆದ 5-6 ತಿಂಗಳಿನಿಂದಲೂ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರಾಗಿ ಕೆಲಸನಿರ್ವಹಿಸುತ್ತಿದ್ದ ಗುರುಸ್ವಾಮಿ ಎಂಬಾತನೇ ಇದಕ್ಕೆಲ್ಲ ಕಾರಣ ಎಂದು ಈತನ ಮೇಲೆ ಪುರಾವೆಗಳಿಲ್ಲದ ಆರೋಪವನ್ನು ಸೃಷ್ಟಿಸಿ ಅಧಿಕಾರಿಗಳು ಏಜೆನ್ಸಿ ಜೊತೆ ಶಾಮೀಲಾಗಿ ಈತನನ್ನು ಕೆಲಸದಿಂದ ತೆಗೆದುಹಾಕಿರುವುದು ಇವರ ಸರ್ವಾಧಿಕಾರಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಅಲ್ಲದೆ ಅನ್ಯಾಯಕ್ಕೊಳಗಾಗಿರುವ ನೌಕರರ ಪರ ನಿಲ್ಲಬೇಕಾದ ಸಂಘಟನೆಯೊಂದು ಅಧಿಕಾರಿಗಳ ಮತ್ತು ಏಜೆನ್ಸಿಯ ಪರ ನಿಂತಿರುವುದು ಅತ್ಯಂತ ಬೇಸರ ಸಂಗತಿಯಾಗಿದೆ, ಆದ್ದರಿಂದ ನಿಯಮ ಉಲ್ಲಂಘಿಸಿ ಕೆಲಸದಿಂದ ತೆಗೆಯಲ್ಪಟ್ಟಿರುವ ನೌಕರರನ್ನು ಕೂಡಲೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು, ಯಳಂದೂರು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 2022 ರಿಂದ ಈವರೆವಿಗೆ ನಿರ್ವಹಣೆಗಳ ನೆಪದಲ್ಲಿ ನಕಲಿ ಬಿಲ್ ಗಳನ್ನು ಮಾಡಿ ಲಕ್ಷಾಂತರ ರು. ಗಳ ಅಕ್ರಮವೆಸಗಿದ್ದು ಪ್ರಭಾರ ವಾರ್ಡನ್ (ಅಡುಗೆಯವರು) ನೇತ್ರಾವತಿ ಎಂಬುವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕೆಲಸದಿಂದ ವಜಾಗೊಳಿಸುವಂತೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಸಿದೆ ಎಂದರು.

ಈ ಸಂಬಂಧ ತನಿಖೆಗೆ ಒಳಪಡಿಸದಿದ್ದರೆ ಜಿಲ್ಲಾಡಳಿತ ಮುಂಭಾಗ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಗುರುಸ್ವಾಮಿ ಮಾತನಾಡಿ, ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾಟಾ ಎಂಟ್ರಿ ಅಪರೇಟರ್ ಆಗಿ ಕೆಲಸ ಮಾಡುತ್ತಿರುವ ತಮಗೆ ಯಾವುದೇ ಕಾರಣ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಮ್ಮ ಪರ ನಿಲ್ಲಬೇಕಾದ ಸಂಘಟನೆಯೊಂದು ಅಧಿಕಾರಿಗಳ ಪರ ನಿಂತಿದೆ ಎಂದು ದೂರಿದರು.

ಮರುನೇಮಕ ಮಾಡಬೇಕು. 3 ತಿಂಗಳ ವೇತನ, ಇಎಸ್ಐ, ಪಿಎಫ್ ಕೊಡಿಸುವ ಮೂಲಕ‌ ನ್ಯಾಯ ಕೊಡಿಸಬೇಕು ಎಂದು ಮೇಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ರೇಣುಕಾ ಮಾತನಾಡಿ, ಹೊನ್ನೂರು ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕಿಯಾಗಿ ನೇಮಕಗೊಂಡು 5 ತಿಂಗಳ ಕಾಲ ಕೆಲಸ ನಿರ್ವಹಿಸಿದ್ದೇನೆ. ಸಂಬಳ ಕೊಡಿ ಎಂದು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಕೆಲಸದಿಂದ ತೆಗೆದುಹಾಕದಿದ್ದರೆ. ವೇತನಕ್ಕಾಗಿ ಇಲಾಖೆ ಜಿಲ್ಲಾ ಕಚೇರಿ, ಏಜೆಸ್ಸಿ ಹತ್ತಿರ ಅಲೆದು ಸಾಕಾಯಿತು. ಕೊನೆಗೆ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಿದ ಮೇಲೆ ಏಜೆನ್ಸಿ ಅವರು 35 ಸಾವಿರ ರು. ನೀಡಿದ್ದಾರೆ. ನಂತರ ಯಾವುದೇ ಸಂಬಳ ನೀಡಿಲ್ಲ. ಇದನ್ನೇ ನಂಬಿಕೊಂಡು ಜೀವನ ಸಾಗಿಸುವ ನನಗೆ ತುಂಬಾ ತೊಂದರೆಯಾಗಿದೆ. ನನಗೆ 5 ತಿಂಗಳ ವೇತನ, ಇಎಸ್ ಐ, ಪಿಎಫ್ ಕೊಡಿಸಬೇಕು. ಮರುನೇಮಕ ಮಾಡಿಕೊಳ್ಳಬೇಕು ಎಂದು ಅಳಲು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಯಳಂದೂರು ತಾಲೂಕು ಬಾಬುಜಗಜೀವನರಾಂ ವೇದಿಕೆ ಅಧ್ಯಕ್ಷ ಕೆಸ್ತೂರು ಮರಪ್ಪ, ಜೋಗಿಸಿದ್ದಯ್ಯ, ನಂಜುಂಡಸ್ವಾಮಿ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ