ಕಾಂಗ್ರೆಸ್ ಸರ್ಕಾರದಿಂದ ರೈತ ವಿರೋಧಿ ಧೋರಣೆ: ಡಾ.ನವೀನ್

KannadaprabhaNewsNetwork |  
Published : Oct 10, 2024, 02:15 AM ISTUpdated : Oct 10, 2024, 02:16 AM IST
೯ಕೆಎಂಎನ್‌ಡಿ-೬ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ‌್ಯದರ್ಶಿ ಡಾ.ನವೀನ್ ಮಾತನಾಡಿದರು. | Kannada Prabha

ಸಾರಾಂಶ

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ತಂದಿದ್ದ ರೈತಪರ ಯೋಜನೆಗಳನ್ನು ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವನ್ನು ಮತ್ತು ರೈತರಿಗೆ ನೀಡುವ ಪಿಂಚಣಿ ಹಣವನ್ನು ಬ್ಯಾಂಕುಗಳು ನೀಡಿರುವ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಅತಿಯಾದ ರಾಜಕೀಯ ಹಸ್ತಕ್ಷೇಪ, ಅಧಿಕಾರಿಗಳ ನಿರಾಸಕ್ತಿ, ರೈತ ವಿರೋಧಿ ಧೋರಣೆಯಿಂದಾಗಿ ಹಾಲು ಉತ್ಪಾದಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಆರೋಪಿಸಿದರು.

ಪಶುಸಂಗೋಪನೆ ಭಾರತ ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಂತಹ ಸಂಸ್ಥೆಗಳನ್ನು ಸರಿಯಾದ ನಿಟ್ಟಿನಲ್ಲಿ ಕರೆದೊಯ್ದು ಹಾಲು ಉತ್ಪಾದಕರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ೧೫ ಒಕ್ಕೂಟಗಳಿವೆ, ೭೦ ಉಪ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಮಾಡುವಲ್ಲಿ ನಿರಾಸಕ್ತಿ ವಹಿಸಿರುವುದು ಕಣ್ಣಿಗೆ ಕಾಣುವ ಸತ್ಯ. ೧೫ ಹಾಲು ಒಕ್ಕೂಟಗಳಿಂದ ೯೬.೮೯ ಲಕ್ಷ ಉತ್ಪಾದಕರಿಂದ ನಿತ್ಯ ೮೨.೯೨ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ೪೬.೨೭ ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ೯.೪೫ ಲಕ್ಷ ಲೀಟರ್ ಹಾಲನ್ನು ಮೊಸರು ತಯಾರಿಸಲಾಗುತ್ತಿದೆ. ಉಳಿದ ಹಾಲನ್ನು ಮೌಲ್ಯವರ್ಧನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ತಂದಿದ್ದ ರೈತಪರ ಯೋಜನೆಗಳನ್ನು ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವನ್ನು ಮತ್ತು ರೈತರಿಗೆ ನೀಡುವ ಪಿಂಚಣಿ ಹಣವನ್ನು ಬ್ಯಾಂಕುಗಳು ನೀಡಿರುವ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೇಂದ್ರ ಪುರಸ್ಕೃತ ರೈತಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.

ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೧ ರು.ನಿಂದ ೨ ರು.ವರೆಗೆ ವಿವಿಧ ಒಕ್ಕೂಟಗಳಲ್ಲಿ ತಡೆಹಿಡಿಯಲಾಗಿದೆ. ಇದನ್ನು ಬಿಜೆಪಿ ರೈತ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ೨೦೨೩ರ ಚುನಾವಣಾ ಪ್ರಚಾರದಲ್ಲಿ ಹಾಲಿಗೆ ೨ ರು. ಪ್ರೋತ್ಸಾಹ ಧನವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಸಿಲ್ಲ. ೨೦೨೪ರ ಮೇ ತಿಂಗಳಿಂದ ರೈತರಿಗೆ ನೀಡಬೇಕಾಗಿರುವ ೫ ರು. ಪ್ರೋತ್ಸಾಹ ಧನವನ್ನೂ ನೀಡಿಲ್ಲ. ಹಾಲಿನ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದೆ. ಒಕ್ಕೂಟಗಳು ಪಶು ಆಹಾರದ ಬೆಲೆಯನ್ನೂ ಹೆಚ್ಚಳ ಮಾಡಿವೆ. ಉತ್ಪಾದಕರು ಮತ್ತು ಜಾನುವಾರುಗಳ ಅಸ್ತಿತ್ವವನ್ನು ನಿರ್ನಾಮ ಮಾಡಲು ರಾಜ್ಯ ಸರ್ಕಾರ ಹೊರಟಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಬೇಕು. ಹಾಲು ಉತ್ಪಾದಕ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ, ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಜೋಗೀಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವರೇಗೌಡ, ಜಿಲ್ಲಾ ಕಾರ್ಯದರ್ಶಿ ವೈರಮುಡಿ ಗೋಷ್ಠಿಯಲ್ಲಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌