ರಾಜ್ಯ ಸರ್ಕಾರದಿಂದ ಮಾದಿಗ ವಿರೋಧಿ ನೀತಿ

KannadaprabhaNewsNetwork | Published : May 4, 2025 1:32 AM

ಸಾರಾಂಶ

ಚಾಮರಾಜನಗರದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಅಧ್ಯಕ್ಷ ಎಸ್. ಅರುಣ್‌ಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾದಿಗ ವಿರೋಧಿ ನೀತಿ ಅನುಸರಿಸುತ್ತಿದ್ದು, ಮಾದಿಗರನ್ನು ತುಳಿಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಹಾಗೂ ನ್ಯಾ.ಕಾಂತರಾಜ್ ಆಯೋಗದ ವರದಿಯಲ್ಲಿ ಮಾದಿಗರೇ ನಂ.೧ ಎಂದಿದೆ, ಅದರ ಆಧಾರದ ಮೇಲೆಯೇ ಒಳಮೀಸಲಾತಿ ನೀಡಬಹುದಿತ್ತು, ರಾಜಕೀಯ ಪ್ರತಿಷ್ಠೆಗಾಗಿ ಹೊಸ ಸಮೀಕ್ಷೆ ನಡೆಸುತ್ತಿದ್ದು, ಇದೊಂದು ಮಾದಿಗರನ್ನು ತುಳಿಯುವ ಷಡ್ಯಂತ್ರ ಎಂದರು.

ಮೇ ೫ ರಿಂದ ಮೇ ೨೩ರ ತನಕ ನ್ಯಾಯಮೂರ್ತಿ ಎಚ್ಎನ್.ನಾಗಮೋಹನ್‌ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವು ನಡೆಸುವ ಪರಿಶಿಷ್ಟ ಜಾತಿಗಳ ಮತ್ತು ಉಪಜಾತಿಗಳ ಸಮಗ್ರ ಸಮೀಕ್ಷೆಯು ನ್ಯಾಯ ಸಮ್ಮತವಾಗಿರಬೇಕು, ಇದರಲ್ಲಿ ಮಾದಿಗ ಸಮುದಾಯದವರು ಪಾಲ್ಗೊಂಡು ಆದಿದ್ರಾವಿಡ ಮಾದಿಗ ಎಂದು ನಮೂದಿಸಿ ಇಲ್ಲದಿದ್ದರೆ ನಮ್ಮನ್ನು ತುಳಿಯುತ್ತಾರೆ ಎಂದರು.

ಸಚಿವರಾದ ಎಚ್.ಸಿ,ಮಹದೇವಪ್ಪ, ಜಿ.ಪರಮೇಶ್ವರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ಪ್ರತಿಷ್ಠೆಗೆ ನಮ್ಮ ೩೦ ವರ್ಷಗಳ ಹೋರಾಟದ ಫಲವನ್ನು ಬಲಿಕೊಡಲು ಹೊರಟಿದ್ದಾರೆ, ಇದು ಸಾಮಾಜಿಕ, ಶೈಕ್ಷಣಿಕ ಗಣತಿ, ಸುಳ್ಳುಗಳೇ ಇಲ್ಲಿ ರಾರಾಜಿಸುತ್ತವೆ, ಆದ್ದರಿಂದ ಸಮೀಕ್ಷೆ ನ್ಯಾಯ ಸಮ್ಮತವಾಗಿರಬೇಕಾದರೆ ಎಲ್ಲಾ ಮೂಲಗಳಿಂದಲೂ ಸಮೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು.

೭೫ ವರ್ಷಗಳಿಂದ ಮೀಸಲಾತಿಯನ್ನು ಕೆಲವೇ ಸಮುದಾಯಗಳು ಉಪಯೋಗಿಸಿಕೊಂದು ಹೆಚ್ಚು ಪ್ರಯೋಜನ ಪಡೆದು, ಮಾದಿಗ ಸಮುದಾಯ ಸಾಮಾಜಿಕ, ಆರ್ಥಿಕ, ಔದ್ಯೋಗಿಕವಾಗಿ, ರಾಜಕೀಯವಾಗಿ ಬಹಳ ಹಿಂದುಳಿದೆ, ಮೀಸಲಾತಿಯ ಲಾಭ ಪಡೆಯದೆ ವಂಚಿತರಾಗಿದ್ದಾರೆ. ಆದ್ದರಿಂದ ತೆಲಂಗಾಣದಂತೆ ಜನಸಂಖ್ಯೆಗನುವಾಗಿ ಮೀಸಲಾತಿ ನೀಡಬೇಕು, ನಾವು ಯಾರ ವಿರೋಧಿಗಳು ಅಲ್ಲ, ಸರ್ಕಾರದ ಮಂತ್ರಿಗಳನ್ನು ನ್ಯಾಯ ಕೇಳುತ್ತಿದ್ದೇವೆ ಎಂದರು.

ಪ್ರಧಾನ ಕಾರ್ಯದರ್ಶಿ ವಕೀಲ ಬೂದಿತಿಟ್ಟು ರಾಜೇಂದ್ರ ಮಾತನಾಡಿ, ಜಿಲ್ಲೆಯ ಹನೂರು ಭಾಗದಲ್ಲಿ ಮಾದಿಗ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಮೀಸಲಾತಿಯಿಂದ ವಂಚಿರಾಗಿದ್ದಾರೆ ಎಂದರು. ಜಿಲ್ಲಾಡಳಿತ ಸಮೀಕ್ಷೆ ಸಮಯಲ್ಲಿ ನ್ಯಾಯ ಸಮ್ಮತ ಸಮೀಕ್ಷೆ ನಡೆಸಬೇಕು, ಸ್ಥಳೀಯ ಗ್ರಾಮ ಸೇವಕರು, ಆಶಾ ಕಾರ್ಯಕರ್ತೆಯರನ್ನು ಉಪಯೋಗಿಸಿಕೊಂಡು ಮನೆ ಮನೆಗೆ ಭೇಟಿ ಕೊಟ್ಟು ನ್ಯಾಯ ಸಮೀಕ್ಷೆ ನಡೆಸಬೇಕು, ಮುಂದಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳ ಮೀಸಲಾತಿ ಅತ್ಯಂತ ಅವಶ್ಯಕವಾಗಿದ್ದು ಸಮುದಾಯದವರು, ಆದಿದ್ರಾವಿಡ ಮಾದಿಗ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಶಿವಕುಮಾರ್, ಎಂ. ರಾಚಯ್ಯ, ಮಾಳಪ್ಪ ಕುಲ್ಕಿ, ಎಂ.ಮುತ್ತುರಾಜ್, ಗಂಗಾಧರ್, ಪರಶಿವ ಇದ್ದರು.

Share this article