ಫೆವರೀಚ್ ಫುಡ್ ಕಂಪನಿಯಿಂದ ಜನವಿರೋಧಿ ಕೃತ್ಯ: ಆರೋಪ

KannadaprabhaNewsNetwork |  
Published : Oct 23, 2024, 12:31 AM ISTUpdated : Oct 23, 2024, 12:32 AM IST
೨೦ಕೆಎಂಎನ್‌ಡಿ-೭ಸಾರ್ವಜನಿಕರ ರಸ್ತೆಗೆ ತಡೆಗೋಡೆ ನಿರ್ಮಿಸಿರುವ ಚಿತ್ರ | Kannada Prabha

ಸಾರಾಂಶ

ಫೆವರೀಚ್ ಕಂಪನಿ ಆರಂಭಿಸಿರುವ ಉತ್ಪನ್ನ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಉನ್ನತ ಹುದ್ದೆಗಳನ್ನು ಹೊರ ರಾಜ್ಯದವರಿಗೆ ನೀಡಿ ಸ್ಥಳೀಯ ಯುವಕರಿಗೆ ಮೂಟೆ ಹೊರುವ, ಗೇಟ್ ಕಾಯುವ, ಕಸ ಗುಡಿಸುವ ಕೆಲಸ ಮಾತ್ರ ನೀಡುತ್ತಿದೆ. ಇವರಿಗೆ ನಿಯಮಾನುಸಾರ ಕನಿಷ್ಠ ವೇತನ ನೀಡದೆ ಶೋಷಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಬಣ್ಣೇನಹಳ್ಳಿ ಬಳಿಯಿರುವ ಮೆಗಾ ಫುಡ್ ಫೇವರಿಚ್ ಕಂಪನಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪರಿಸರವನ್ನು ಹಾಳು ಮಾಡುತ್ತಿರುವುದಲ್ಲದೇ ತನ್ನ ಸುತ್ತಲಿನ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿ ಭೂ ಕಬಳಿಕೆ ಮಾಡುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಫೇವರಿಚ್ ಫುಡ್ ಕಂಪನಿಯ ಜನ ವಿರೋಧಿ ಕೃತ್ಯಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಜರುಗಿಸದಿದ್ದರೆ ರೈತರೊಂದಿಗೆ ಸೇರಿ ಬೀದಿ ಹೋರಾಟಕ್ಕಿಳಿಯುವುದಾಗಿ ಶಾಸಕ ಎಚ್.ಟಿ.ಮಂಜು ಎಚ್ಚರಿಸಿದ್ದಾರೆ.

ಪಟ್ಟಣದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೇವರಿಚ್ ಫುಡ್ ಕಂಪನಿಯ ಪರಿಸರ ವಿರೋಧಿ ಮತ್ತು ಜನ ವಿರೋಧಿ ಕಾರ್ಯಗಳ ಬಗೆಗಿನ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದರು.

ತಾಲೂಕಿನ ರೈತ ಸಮುದಾಯಕ್ಕೆ ಮತ್ತು ನಿರುದ್ಯೋಗಿ ಯುವಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಕೆಐಡಿಬಿ ಮೂಲಕ ರೈತರಿಂದ ಸ್ವಾಧೀನಪಡಿಸಿಕೊಂಡಿದ್ದ ಸುಮಾರು ೩೦೦ಕ್ಕೂ ಹೆಚ್ಚು ಎಕರೆ ಪ್ರದೇಶದ ಭೂಮಿಯನ್ನು ಫೇವರಿಚ್ ಕಂಪನಿಗೆ ಕೇವಲ ಪ್ರತಿ ಎಕರೆಗೆ ೬ ಲಕ್ಷ ರು.ಗಳಂತೆ ನೀಡಿತ್ತು. ನೆಪ ಮಾತ್ರಕ್ಕೆ ಒಂದೆರಡು ಆಹಾರ ತಯಾರಿಕಾ ಘಟಕಗಳನ್ನು ಪ್ರಾರಂಭಿಸಿರುವ ಫೇವರಿಚ್ ಕಂಪನಿ ಉಳಿದ ಭೂಮಿಯನ್ನು ಪ್ರತಿ ಎಕರೆಗೆ ೨-೩ ಕೋಟಿ ರು.ನಂತೆ ಇತರರಿಗೆ ಮಾರಾಟ ಮಾಡುತ್ತಾ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದೆ. ಈ ಪ್ರದೇಶದಲ್ಲಿ ಆರಂಭಿಸಲಾಗಿರುವ ಆಹಾರ ಉತ್ಪನ್ನ ಘಟಕಗಳನ್ನು ಹೊರತುಪಡಿಸಿ ಉಳಿದಿರುವ ಖಾಲಿ ಜಾಗವನ್ನು ರೈತರಿಗೆ ವಾಪಸ್ ನೀಡುವಂತೆ ಒತ್ತಾಯಿಸಿದರು.

ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯ:

ಫೆವರೀಚ್ ಕಂಪನಿ ಆರಂಭಿಸಿರುವ ಉತ್ಪನ್ನ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಉನ್ನತ ಹುದ್ದೆಗಳನ್ನು ಹೊರ ರಾಜ್ಯದವರಿಗೆ ನೀಡಿ ಸ್ಥಳೀಯ ಯುವಕರಿಗೆ ಮೂಟೆ ಹೊರುವ, ಗೇಟ್ ಕಾಯುವ, ಕಸ ಗುಡಿಸುವ ಕೆಲಸ ಮಾತ್ರ ನೀಡುತ್ತಿದೆ. ಇವರಿಗೆ ನಿಯಮಾನುಸಾರ ಕನಿಷ್ಠ ವೇತನ ನೀಡದೆ ಶೋಷಿಸುತ್ತಿದೆ. ಸ್ಥಳೀಯ ಯುವಕರು ಉದ್ಯೋಗ ಬಿಟ್ಟು ಹೋಗುವಂತೆ ಮಾಡಲು ಕಂಪನಿ ತನ್ನ ಮೇಲಾಧಿಕಾರಿಗಳ ಮೂಲಕ ಅನಗತ್ಯ ಒತ್ತಡ ಹಾಕುತ್ತಿದೆ. ಕಂಪನಿಯ ಉದ್ಯೋಗಗಳಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಸಿಂಹಪಾಲು ನೀಡುವಂತೆ ಶಾಸಕರು ಆಗ್ರಹಿಸಿದರು.

ತ್ಯಾಜ್ಯ ನೀರಿನಿಂದ ಪರಿಸರ ಅನೈರ್ಮಲ್ಯ:

ಫೆವರೀಚ್ ಕಂಪನಿ ತನ್ನ ತ್ಯಾಜ್ಯ ನೀರನ್ನು ಆಸುಪಾಸಿನ ಕೆರೆಗಳಿಗೆ ಬಿಡುವ ಮೂಲಕ ಜನ- ಜಾನುವಾರುಗಳ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿದೆ. ಇದರ ಬಗ್ಗೆ ಈ ಹಿಂದೆ ರೈತರು ಪ್ರತಿಭಟನೆ ನಡೆಸಿ ಪತ್ರಿಕೆಗಳಲ್ಲಿ ವರದಿಯಾದರೂ ಪರಿಸರ ಇಲಾಖೆಯ ಯಾವುದೇ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಪರಿಸರ ಮಾಲಿನ್ಯ ತಡೆಯುವ ಕೆಲಸ ಮಾಡಿಲ್ಲ. ಕೆರೆಯ ಸುತ್ತಲಿನ ಅಂತರ್ಜಲವೂ ಕಲುಷಿತಗೊಂಡಿದ್ದು ರೈತ ಸಮುದಾಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ತಕ್ಷಣವೇ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಲುಷಿತ ನೀರು ಕೆರೆ- ಕಟ್ಟೆಗಳಿಗೆ ಹರಿದು ಬರದಂತೆ ಕ್ರಮ ವಹಿಸುವಂತೆ ಆಗ್ರಹಿಸಿದರು.

ಕೆರೆ ಮತ್ತು ರಸ್ತೆ ಒತ್ತುವರಿ:

ಫೆವರೀಚ್ ಕಂಪನಿಯ ವ್ಯಾಪ್ತಿಗೆ ಸೇರಿದಂತೆ ರೈತರು ಉಪಯೋಗಿಸುವ ಕೆರೆ ಇದೆ. ಸರ್ವೇ ನಂ.೨೧ರಲ್ಲಿರುವ ಸಾರ್ವಜನಿಕ ಕೆರೆಯ ೧.೩೮ ಎಕರೆ ಪ್ರದೇಶದಷ್ಟು ಜಾಗವನ್ನು ಫೆವರೀಚ್ ಕಂಪನಿ ಒತ್ತುವರಿ ಮಾಡಿಕೊಂಡಿದೆ. ಇದರ ಜೊತೆಗೆ ಬಣ್ಣೇನಹಳ್ಳಿಗೆ ಹೋಗುವ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರ ರಸ್ತೆಗೆ ತಡೆಗೋಡೆಯನ್ನು ಕಟ್ಟಿ ರೈತರ ಸಂಚಾರಕ್ಕೆ ಅಡ್ಡಿಪಡಿಸಿದೆ. ಕೆರೆಗಳ ಸಂರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿ. ಕೆರೆ ಒತ್ತುವರಿಯ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಲಿಖಿತ ದೂರು ನೀಡಿದ್ದರೂ ಜಿಲ್ಲಾಡಳಿತ ಇದುವರೆಗೂ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ದೂರಿದರು.

ಸಾರ್ವಜನಿಕರು ತಿರುಗಾಡುವ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಮೆಗಾ ಫುಡ್ ಫೆವರೀಚ್ ಕಂಪನಿಯಿಂದ ಪರಿಸರಕ್ಕೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸದಿದ್ದರೆ ರೈತರೊಂದಿಗೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ