ಕೇಂದ್ರ,ರಾಜ್ಯ ಸರ್ಕಾರಗಳಿಂದ ಜನವಿರೋಧಿ ನೀತಿ

KannadaprabhaNewsNetwork |  
Published : Sep 14, 2025, 01:04 AM IST
ಮಧುಗಿರಿಯಲ್ಲಿ ಸಿಐಟಿಯು ವತಿಯಿಂದ ಮಾಲಿಮರಿಯಪ್ಪ ರಂಗಮಂದಿರದಲ್ಲಿ 10 ತಾಲೂಕುಗಳಿಂದ ವಿವಿಧ ಸಂಘಟನೆಗಳಿಂದ  ನಡೆದ 8ನೇ ಸಿಐಟಿಯು ತುಮಕೂರು ಜಿಲ್ಲಾ ಸಮ್ಮೇಳನಕ್ಕೆ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮೀ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ರೈತರ, ಬಡವರ, ಕೃಷಿಕರ, ಕೂಲಿಕಾರ್ಮಿಕರ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿವ ಶ್ರಮಜೀವಿಗಳ ಬದುಕಿನ ಜೊತೆ ಚೆಲ್ಲಾಟವಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸಿಐಟಿಯು ಮತ್ತು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮೀ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ರೈತರ, ಬಡವರ, ಕೃಷಿಕರ, ಕೂಲಿಕಾರ್ಮಿಕರ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿವ ಶ್ರಮಜೀವಿಗಳ ಬದುಕಿನ ಜೊತೆ ಚೆಲ್ಲಾಟವಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸಿಐಟಿಯು ಮತ್ತು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮೀ ಆರೋಪಿಸಿದರು.

ಶನಿವಾರ ಮಧುಗಿರಿ ಮಾಲಿಮರಿಯಪ್ಪ ರಂಗಮಂದಿರದಲ್ಲಿ 10 ತಾಲೂಕುಗಳಿಂದ ಆಯ್ದ ವಿವಿಧ ಸಂಘಟನೆಗಳಿಂದ ಏರ್ಪಡಿಸಿದ್ದ ಎರಡು ದಿನಗಳ ಕಾಲ ನಡೆಯುವ 8ನೇ ಸಿಐಟಿಯು ತುಮಕೂರು ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಶ್ರಮಜೀವಿಗಳ ಸಹಕಾರವಿಲ್ಲದೆ ಯಾವ ವರ್ಗದವರು ತಮ್ಮ ಕೆಲಸ ಸಾಧಿಸಲು ಸಾಧ್ಯವಿಲ್ಲ. ಬಂಡವಾಳ ಶಾಹಿಗಳು ಕಾರ್ಮಿಕರ ಅವಶ್ಯಕತೆ ಇಲ್ಲವೆಂದು ನಿರಾಕರಿಸುತ್ತಿದ್ದು, ಸ್ವಯಂಘೋಷಿತ ಪ್ರಭುಗಳಾಗಲು ಹೊರಟಿದ್ದಾರೆ. ಸರ್ಕಾರಗಳು ತಮ್ಮ ಕಾರ್ಯ ಯಶಸ್ವಿಗೊಳಿಸಲು ಖಾಯಂ ಹೊರಗುತ್ತಿಗೆ ನೌಕರರನ್ನು ಬಳಸಿಕೊಳ್ಳುತ್ತಿದ್ದು, ಅವರ ಬದುಕಿನ ಸೇವಾ ಭದ್ರತೆಗೆ ಗಮನ ಹರಿಸದೆ ದುಡಿಸಿಕೊಳ್ಳುತ್ತಿರುವುದು ಯಾವ ನ್ಯಾಯ.? ಶೇ.70ರಷ್ಟು ಮಂದಿ ದುಡಿವ ಕೈಗಳಿಗೆ ಉದ್ಯೋಗವಿಲ್ಲ, ಅತಂತ್ರ ಸ್ಥಿತಿಯಲ್ಲಿ 20 ವರ್ಷ ತುಂಬಿದರು ಬಿಸಿಯೂಟ ನೌಕರರಿಗೆ 5 ಸಾವಿರ ವೇತನ ನೀಡುತ್ತಿಲ್ಲ, 50 ವರ್ಷ ದುಡಿದರು ಅಂಗನವಾಡಿ ನೌಕರರಿಗೆ 13 ಸಾವಿರ ವೇತನ ದಾಟಿಲ್ಲ, ಖಾಯಂ, ಗ್ರಾಚ್ಯುಟಿ ಇಲ್ಲ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೇ ಕೈ ಚಲ್ಲಿವೆ, ಖಾಯಂ ಸ್ವರೂಪದ ಉದ್ಯೋಗಗಳು ಇಂದು ಬೇರೆ ಸ್ವರೂಪ ಪಡೆಯುತ್ತಿವೆ ಎಂದು ಸರ್ಕಾರಗಳ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಜಿಲ್ಲಾಧ್ಯಕ್ಷ ಸೈಯದ್‌ ಮುಜೀಬ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಕೇಳಿಸಿಕೊಳ್ಳದೆ ಕಿವುಡತನ ತೋರುತ್ತಿವೆ.ಇ ದಕ್ಕಾಗಿಯೇ ನಮ್ಮಲ್ಲಿ ಒಗ್ಗಟ್ಟು-ಐಕ್ಯತೆ ಬೇಕು ಮಧುಗಿರಿ. ಪಾವಗಡ ಕೊರಟಗೆರೆ ಮತ್ತು ಶಿರಾ ತಾಲೂಕುಗಳು ಅತ್ಯಂತ ಬರಪೀಡಿತ ಪ್ರದೇಶಗಳಾಗಿವೆ. ಇಲ್ಲಿಗೆ ಏಕೆ ದೊಡ್ಡ ಪ್ರಮಾಣದ ಗಾರ್ಮೆಂಟ್ಸಗಳು ಬರುತ್ತಿಲ್ಲ,ಬೆಂಗಳೂರಲ್ಲೇ ಏಕೆ ಕೇಂದ್ರಿಕೃತವಾಗಿವೆ. ಈ ತಾಲೂಕುಗಳಿಂದ ದೊಡ್ಡ ಸಂಖ್ಯೆಯ ಹೆಣ್ಣುಮಕ್ಕಳು ಉದ್ಯೋಗ ಅರಸಿ ನಗರಗಳಿಗೆ ಹೋಗುತ್ತಿದ್ದಾರೆ. ಕೇಂದ್ರಕೃತ ವ್ಯವಸ್ಥೆಯನ್ನು ವೀಕೇಂದ್ರಿಕರಣಗೊಳಿಸಲು ಗಟ್ಟಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲ ಮಾತನಾಡಿ, ದುಡಿವ ಜನರಿಗೆ ಬದುಕಲು ಯೋಗ್ಯ ಕೂಲಿ, ವಸತಿ,ಪಿಂಚಣಿ ನೀಡಬೇಕು. ಗುತ್ತಿಗೆ ,ಹೊರಗುತ್ತಿಗೆ ಕಾರ್ಮಿಕರ ಕಾಯಂ ಮಾಡಬೇಕು.ಅಸಂಘಟಿತ ಕಾರ್ಮಿಕರ ಸಮಗ್ರ ಸಾಮಾಜಿಕ ಭದ್ರತೆ ,ಬರಪೀಡಿತ-ಒಣ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಮಧುಗಿರಿ ಉಪ ವಿಭಾಗಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಈ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಜೊತೆಗೆ ಮಧುಗಿರಿಯ ಏಕಶಿಲಾ ಬೆಟ್ಟ ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಇಲ್ಲಿ ವ್ಯಾಪಾರ ವಹಿವಾಟು ನಡೆದು ಜನರ ಜೀವನ ಮಟ್ಟ ಸುಧಾರಿಸಲಿದೆ ಎಂದರು.

10 ತಾಲೂಕುಗಳಿಂದ ಆಗಮಿಸಿದ್ದ ಮಹಿಳೆಯರು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ ರ್ಯಾಲಿಗೆ ಚಾಲನೆ ನೀಡಿದರು. ನಂತರ ಎಲ್ಲರೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸುವ ಮೂಲಕ ವೇದಿಕೆಗೆ ಬಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಲೋಕೇಶ್‌,ಕಾರ್ಯಾಧ್ಯಕ್ಷೆ ಪಾರ್ವತಮ್ಮ,ಗೌರವಾಧ್ಯಕ್ಷ ಕೃಷ್ಣಪ್ಪ, ಸಿಐಟಿಯು ಪದಾಧಿಕಾರಿಗಳಾದ ಬಿ.ಉಮೇಶ್,ಶಣ್ಮುಗಪ್ಪ,ಗುಲ್ಜಾರ್,ರಂಗಧಾಮಯ್ಯ,ಅನುಸೂಯ,ಸುಬ್ರಹ್ಮಣ್ಯ ,ರವಿ ಹಾಗೂ ಎಲ್ಲ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು,ಅಂಗನವಾಡಿ,ಬಿಸಿಯೂಟ ಹಾಗೂ ಇತರೆ ವಲಯದ ಮಹಿಳೆಯರು ಭಾಗವಹಿಸಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ