ದಾಂಡೇಲಿ: ರಾಜ್ಯದ ಮುಖ್ಯಮಂತ್ರಿ ಇಂದು ಮಂಡಿಸಿದ ₹4.09 ಲಕ್ಷ ಕೋಟಿ 2025-26ನೇ ಸಾಲಿನ ಬಜೆಟ್ ದಲ್ಲಿ ರಾಜ್ಯದ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಅತ್ಯಗತ್ಯವಿರುವ ಉದ್ಯೋಗ ಸೃಷ್ಟಿಸಿ, ಉದ್ಯೋಗ ಖಾತ್ರಿಗೊಳಿಸದೇ ಯುವಜನರಿಗೆ ನಿರಾಸೆ ಮೂಡಿಸಿದ ಬಜೆಟ್ ಆಗಿದೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಖಂಡಿಸಿದೆ.
''''''''ನನ್ನ ವೃತ್ತಿ, ನನ್ನ ಆಯ್ಕೆ'''''''' ಕಾರ್ಯಕ್ರಮದಡಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವ ಪ್ರಸ್ತಾಪ ಸ್ವಾಗತಾರ್ಹ. ಆದರೆ ವೃತ್ತಿ ಮಾರ್ಗದರ್ಶನ ಪಡೆದವರಿಗೆ ಉದ್ಯೋಗ ಸೃಷ್ಟಿಸದೇ ಇರುವುದು ರಾಜ್ಯ ಸರ್ಕಾರವು ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30ರಡಿ ₹50 ಸಾವಿರ ಕೋಟಿ ಹೂಡಿಕೆ ಹಾಗೂ 1 ಲಕ್ಷ ಹೊಸ ಉದ್ಯೋಗ ಸೃಜನೆಯ ಗುರಿ ಹಾಗೂ ₹21,911 ಕೋಟಿ ಹೂಡಿಕೆಯೊಂದಿಗೆ ಪ್ರಾರಂಭವಾದ ಫಾಕ್ಸ್‌ಕಾನ್ ಸಂಸ್ಥೆಗೆ ಮೊಬೈಲ್ ಫೋನ್ ಗಳ ಉತ್ಪಾದನಾ ಘಟಕಕ್ಕೆ ₹6970 ಕೋಟಿ ಮೌಲ್ಯದ ಪ್ರೋತ್ಸಾಹ ನೀಡಲು ಕ್ರಮ. ಇದರಿಂದ ₹50 ಸಾವಿರ ಉದ್ಯೋಗ ಸೃಜನೆಯ ನಿರೀಕ್ಷೆ ಮತ್ತು ಬೆಂಗಳೂರು ಹೊರತು ಪಡಿಸಿ, ಇತರ ನಗರಗಳಗಲ್ಲೂ ನಾವೀನ್ಯತೆ, ಉದ್ಯಮಶೀಲತೆ ಉತ್ತೇಜಿಸಲು, ₹1 ಸಾವಿರ ಕೋಟಿ ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -ಲೀಪ್ ಪ್ರಾರಂಭ. ಈ ವರ್ಷ ₹200 ಕೋಟಿ ಅನುದಾನ, 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ಆದರೆ ಹಿಂದಿನ ಬಜೆಟ್ ನಲ್ಲಿಯೂ ಈ ರೀತಿ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹಾಗೂ ಗುರಿ ಎಂಬ ಆಕರ್ಷಕವಾದ ಮಾತುಗಳು ರಾಜ್ಯದ ಯುವಜನರಿಗೆ ಅಂಗೈನಲ್ಲಿ ಆಕಾಶ ತೋರಿಸಿರುವುದು ಅನುಭವಾಗಿದೆ ಎಂದಿದ್ದಾರೆ.
ಕೃಷಿಯಾಧಾರಿತ, ಪಶು ಸಂಗೋಪನೆ ಆಧಾರಿತ ಕೈಗಾರಿಕೆಗಳು, ಸ್ಥಳೀಯವಾಗಿ ಕೈಗಾರಿಕೆಗಳನ್ನು ಆರಂಭಿಸಿ, ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸಲು ಯಾವುದೇ ಅಗತ್ಯ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯ ಈ ಬಜೆಟ್ ನಲ್ಲಿ ರಾಚುತ್ತಿದೆ. ಖಾಸಗಿ ರಂಗದ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿಯೂ ಕೂಡ ವಿಫಲವಾಗಿದೆ. ರಾಜ್ಯದ ಯುವಜನತೆ ಸರ್ಕಾರದ ಈ ಯುವಜನ ಹಾಗೂ ಜನಸಾಮನ್ಯರ ವಿರೋಧಿ ಬಜೆಟ್ ನ್ನು ತಿರಸ್ಕರಿಸಿ ಉದ್ಯೋಗ ಭದ್ರತೆ ಖಾತ್ರಿಪಡಿಸುವ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗುವಂತೆ ಒತ್ತಾಯಿಸಿ ಪ್ರತಿಭಟಿಸಲು ಡಿವೈಎಫ್ಐ ರಾಜ್ಯ ಸಮಿತಿ ಕರೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.