ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಹಾಗೂ ದೂರಗಾಮಿ ಯೋಜನೆಯಾದ ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ( ಪಿ.ಎಂ.ಜನ್ ಮನ್) ವಿಶೇಷ ಯೋಜನೆಯ ಅನುದಾನದಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಟ್ರಿಂಜೆಯಿಂದ ಸುಲ್ಕೇರಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ವೇಗದಿಂದ ನಡೆಯುತ್ತಿದೆ.
ಒಟ್ಟು 6.8 ಕೋಟಿ ರು. ವೆಚ್ಚದಲ್ಲಿ ಅಟ್ರಿಂಜೆಯಿಂದ ಸುಲ್ಕೇರಿ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆಯ ಕಾಮಗಾರಿಗೆ ಸಂಸದ ಬ್ರಿಜೇಶ್ ಚೌಟ ಫೆ. 8 ರಂದು ಶಿಲಾನ್ಯಾಸ ನೆರವೇರಿಸಿದ್ದರು. ಕಾಮಗಾರಿ ಕೂಡಲೇ ಪ್ರಾರಂಭಗೊಂಡಿದ್ದು ಕಾರ್ಕಳದ ನವೀನ್ ಕುಮಾರ್ ಹೆಗ್ಡೆ ಗುತ್ತಿಗೆದಾರರಾಗಿದ್ದಾರೆ. ಒಟ್ಟು 3.25 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು 2.50 ಕಿ.ಮೀ.ಡಾಂಬರು, 0.75 ಕಿ.ಮೀ. ನಷ್ಟು ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದೆ. ಚರಂಡಿ ಸಹಿತ ಒಟ್ಟು 12 ಅಡಿ ಅಗಲದ ರಸ್ತೆ ಇದಾಗಿರಲಿದೆ.ರಸ್ತೆಯಲ್ಲಿ ಒಟ್ಟು 7 ಮೋರಿಗಳು, 150 ಮೀ. ಕಾಂಕ್ರೀಟ್ ಚರಂಡಿ ನಿರ್ಮಾಣವಾಗಲಿದ್ದು 90 ಮೀಟರ್ ನಷ್ಟು ರಿಟೈನಿಂಗ್ ಗೋಡೆ ರಚನೆಯಾಗಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ 5 ವರ್ಷಗಳ ಹಾಗೂ 6 ವರ್ಷಗಳ ನವೀಕರಣ ಆಗಲಿದೆ. ರಸ್ತೆ ಜತೆಗೆ ಮಹತ್ವವಾಗಿರುವ ಮತ್ತು ಬಹು ವರ್ಷದ ಬೇಡಿಕೆಯ 21 ಮೀಟರ್ ಉದ್ದದ, 7.50 ಮೀ. ಅಗಲದ ಹಾಗೂ 4.50 ಮೀಟರ್ ಎತ್ತರದ ಸೇತುವೆ 2.70 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ರಸ್ತೆ ಸಮತಟ್ಟು ಹಾಗೂ ಮೋರಿಗಳ ನಿರ್ಮಾಣದ ಜತೆಗೆ ಸೇತುವೆ ಪಿಲ್ಲರ್ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ಪೂರ್ಣಗೊಂಡಾಗ ಸುಮಾರು 200 ಕ್ಕೂ ಹೆಚ್ಚು ಅಧಿಕ ಮನೆಯವರಿಗೆ ಇದು ಪ್ರಯೋಜನವಾಗಲಿದೆ.
.....................ದೇಶದ ಪ್ರತಿ ಹಳ್ಳಿಯಲ್ಲಿ ಬುಡಕಟ್ಟು ಹಾಗೂ ಮೂಲನಿವಾಸಿ ಸಮುದಾಯವನ್ನು ಗುರುತಿಸಿ ರಸ್ತೆ ಸಹಿತ ಅಗತ್ಯ ಸವಲತ್ತು ಒದಗಿಸುವ ಗುರಿ ಪಿ.ಎಂ. ಜನ ಮನ್ ಯೋಜನೆಯ ಗುರಿಯಾಗಿದೆ. ಮಳೆಗಾಲಕ್ಕೂ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
-ಬ್ರಿಜೇಶ್ ಚೌಟ, ದ.ಕ. ಸಂಸದ............ಕಾಮಗಾರಿ ಚುರುಕಿನಲ್ಲಿದೆ ಮತ್ತು ವೇಗದಲ್ಲಿದೆ. ಕಾಲಕಾಲಕ್ಕೆ ಇದರ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ತಾಂತ್ರಿಕವಾಗಿಯೂ ಕೆಲವಷ್ಟು ಸಮಯ ಬೇಕಾಗಿದೆ. ರಸ್ತೆ ನಿರ್ಮಾಣದಲ್ಲಿ ಎಲ್ಲೂ ಲೋಪವಾಗದಂತೆ ಮುತುವರ್ಜಿ ವಹಿಸಲಾಗುವುದು.- ಪಲ್ಲವಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಯೋಜನಾ ಉಪವಿಭಾಗ, ಮಂಗಳೂರು.