ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು

KannadaprabhaNewsNetwork | Published : May 1, 2025 12:50 AM

ಸಾರಾಂಶ

ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ, ವಿವಿಧ ಸಮುದಾಯಗಳ ಜನರ ಅನುಭವ ಮತ್ತು ಆನುಭಾವದ ಸಮ್ಮಿಲನ ಎಂದು ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ, ತುಮಕೂರು

ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ, ವಿವಿಧ ಸಮುದಾಯಗಳ ಜನರ ಅನುಭವ ಮತ್ತು ಆನುಭಾವದ ಸಮ್ಮಿಲನ ಎಂದು ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ವೀರಶೈವ-ಲಿಂಗಾಯಿತ ಸಮುದಾಯದ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲ ಸಮುದಾಯವರಿಗೂ ತಮ್ಮ ನೋವು, ನಲಿವುಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶವಿದ್ದ ಮೊದಲ ವೇದಿಕೆ ಅನುಭವ ಮಂಟಪ ಎಂದರು.

ಬಸವಣ್ಣನವರ ವಚನಗಳಲ್ಲಿ ನಾಡಿನ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ವಿಚಾರಗಳನ್ನು ಒಳಗೊಂಡಿದ್ದು, ಇಂದಿಗೂ ಪ್ರಸ್ತುತವಾಗಿದೆ. ಪಂಡಿತ, ಪಾಮರರ ಭಾಷೆಗೆ ಬದಲಾಗಿ, ಜನರ ಆಡು ಭಾಷೆಯಾದ ಕನ್ನಡದ ಮೂಲಕ ಜಗತ್ತಿನ ಆಗುಹೋಗುಗಳನ್ನು ತಿಳಿಸುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಬಸವಣ್ಣವರು ವಚನ ಸಾಹಿತ್ಯದ ಮೂಲಕ ಮಾಡಿದರು ಎಂದರು.

ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಅವರು, ನುಡಿದಂತೆ ನಡೆದವರು. ಅಲ್ಲದೆ ಸಮಾಜದಲ್ಲಿ ನಡೆ, ನುಡಿಗಳು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟರು. ಕಾಯಕ, ದಾಸೋಹದ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿ ಪರಿವರ್ತನೆ ಕಾಣಬಹುದು ಎಂದು ನುಡಿದರು.

ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಪರಮೇಶ್ ಮಾತನಾಡಿ, ಬಸವಣ್ಣನವರ ಆಚಾರ, ವಿಚಾರಗಳನ್ನು ಪಾಲಿಸುತ್ತಾ ನಡೆದರೆ, ಜೀವನ ಸಾರ್ಥಕವಾಗುತ್ತದೆ. 12 ನೇ ಶತಮಾನದಲ್ಲಿ ಅವರು ಹೇಳಿದ ಮಾತುಗಳು 21ನೇ ಶತಮಾನದಲ್ಲಿಯೂ ಪ್ರಸ್ತುತವಾಗಿವೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ನಮ್ಮ ಆದ್ಯತೆಯಾಗಬೇಕು ಎಂದರು.

ಮಹಿಳಾ ಹೋರಾಟಗಾರ್ತಿ ಡಾ.ಶೈಲಾ ನಾಗರಾಜು ಮಾತನಾಡಿ, ಕಾಯಕ, ದಾಸೋಹದ ಮೂಲಕ ಕನ್ನಡ ಭಾಷೆಯನ್ನು ಧರ್ಮ ಭಾಷೆಯನ್ನಾಗಿಸಿದವರು ಬಸವಣ್ಣ. ತಮ್ಮಅನುಭವ ಮಂಟಪದಲ್ಲಿ 774 ಜನ ಪುರುಷ, 33 ಮಹಿಳಾ ವಚನಗಾರ್ತಿಯರಿಗೆ ಅವಕಾಶ ನೀಡಿ, ಹೆಣ್ಣುಗಂಡು ಎಂಬ ಭೇದ ಭಾವವಿಲ್ಲದೆ ಎಲ್ಲರಿಗೂ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿ, ಅಸಮಾನತೆ ತೊಲಗಿಸಲು ಪ್ರಯತ್ನಪಟ್ಟರು ಎಂದರು.

ಜಿಲ್ಲಾ ಬ್ರಾಹ್ಮಣ ಸಭಾದ ಮುಖಂಡರಾದ ಅನಂತರಾಮು ಮಾತನಾಡಿ, ಬಸವಣ್ಣನವರ ಪ್ರತಿ ವಚನಗಳಲ್ಲಿ ಬದುಕಿನ ಪಾಠವಿದೆ. ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದಾರೆ. ನಮ್ಮ ನಡೆ, ನುಡಿಗಳು ಹೇಗಿರಬೇಕು ಎಂಬುದನ್ನು ಜಗತ್ತಿಗೆ ತಿಳಿ ಹೇಳಿದ ಮಹಾಪುರುಷ. ಅವರ ಒಂದೊಂದು ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಇತಿಹಾಸಕಾರ ಡಾ.ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಅಸಮಾನತೆಯಿಂದ ಕೂಡಿದ ಸಮಾಜವನ್ನು ಸಮ ಸಮಾಜದೆಡೆಗೆ ತೆಗೆದುಕೊಂಡು ಹೋದ ಮಹಾಪುರುಷ ಬಸವಣ್ಣ, ಅಸ್ಪೃಶ್ಯತೆ ನಿವಾರಣೆಗೆ ಅಂತರಜಾತಿ ವಿವಾಹ ಮದ್ದು ಎಂಬುದನ್ನು ಮೊದಲು ತೋರಿಸಿದವರು ಬಸವರೇಶ್ವರರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಎಲ್ಲರೂ ದುಡಿಯುವಂತೇ ಪ್ರೇರೇಪಿಸಿದವರು ಎಂದರು.

ಪ್ರೊ.ಬೇವಿನ ಮರದ ಸಿದ್ದಪ್ಪ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರರ ರಾಜೇಶ್ವರಿ, ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ಮುಖಂಡರಾದ ಟಿ.ಆರ್. ಸದಾಶಿವಯ್ಯ, ಮಲ್ಲಸಂದ್ರ ಶಿವಣ್ಣ, ಅಟ್ರಾಸಿಟಿ ಕಮಿಟಿಯ ರಂಜನ್, ಹೊಸಕೋಟೆ ನಟರಾಜು, ಕನ್ನಡ ಪ್ರಕಾಶ್, ಕೆಂ.ಬ.ರೇಣುಕಯ್ಯ, ಡಾ.ದರ್ಶನ್, ಎಂ.ಎಸ್.ಉಮೇಶ್, ಕೊಪ್ಪಲ್ ನಾಗರಾಜು, ಆನಂತರಾಮು, ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಮತ್ತಿತರರು ಉಪಸ್ಥಿತರಿದ್ದರು.

Share this article