ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ

| Published : Sep 16 2025, 12:04 AM IST

ಸಾರಾಂಶ

ಮಂಗಳೂರಿನ ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ಭಾನುವಾರ ಕಲ್ಕೂರ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ- ಶ್ರೀ ಕೃಷ್ಣವೇಷ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ರಂಗು ತುಂಬಿದರು.

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಾಲಯ ಪ್ರಾಂಗಣದಲ್ಲಿ ಭಾನುವಾರ ಶ್ರೀ ಕೃಷ್ಣನ ವೈವಿಧ್ಯಮಯ ‘ಅವತಾರ’ಗಳ ದರ್ಶನವಾಯಿತು. ಕ್ಷೇತ್ರದ ತುಂಬೆಲ್ಲ ಕೃಷ್ಣ ವೇಷ ಧರಿಸಿದ ಮಕ್ಕಳ ಕಲರವ.

ಕಲ್ಕೂರ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ- ಶ್ರೀ ಕೃಷ್ಣವೇಷ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ರಂಗು ತುಂಬಿದರು.

ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾಕೃಷ್ಣ, ರಾಧಾ ಮಾಧವ, ಯಶೋದ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ, ಯಕ್ಷಕೃಷ್ಣ, ನಂದ ಗೋಕುಲ, ಛಾಯಾಕೃಷ್ಣ, ಶ್ರೀಕೃಷ್ಣ ವರ್ಣ ವೈಭವ, ಪಂಡರಾಪುರ ವಿಠಲ, ಸುಧಾಮಕೃಷ್ಣ , ಆನ್‌ಲೈನ್‌ ವಿಭಾಗದಲ್ಲಿ ವೃಕ್ಷಕೃಷ್ಣ, ಗೋಪಾಲಕೃಷ್ಣ ಮತ್ತಿತರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.ಬೆಳಗ್ಗಿನಿಂದ ರಾತ್ರಿವರೆಗೆ ಒಟ್ಟು 43 ವಿಭಾಗಗಳಲ್ಲಿ, 12 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಜತೆಗೆ ವಿವಿಧ ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ರಾತ್ರಿ 12ಕ್ಕೆ ಅರ್ಘ್ಯ ಪ್ರದಾನ- ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.ಮಕ್ಕಳಿಗೆ ಪುಣ್ಯಪುರುಷರ ನಾಮಕರಣ ಮಾಡಿ: ಶ್ರೀಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ನಮ್ಮ ಮಕ್ಕಳಿಗೆ ವೇದ, ಪುರಾಣ, ಉಪನಿಷತ್‌ಗಳಲ್ಲಿರುವ ಪುರಾಣದ ಪುಣ್ಯ ಪುರುಷರ ನಾಮಕರಣ ಮಾಡುವ ಮೂಲಕ ಸಂಸ್ಕೃತಿಯನ್ನು ಪರಿಚಯಿಸಿ ಸಮಾಜದಲ್ಲಿ ಉನ್ನತ ಪರಿವರ್ತನೆಗೆ ನಾಂದಿಯಾಗಬೇಕು ಎಂದು ಕರೆ ನೀಡಿದರು.ಮಕ್ಕಳಿಗೆ ಶ್ರೀಕೃಷ್ಣ ವೇಷ ಹಾಕುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕು. ಕಲ್ಕೂರ ಪ್ರತಿಷ್ಠಾನವು ಕಳೆದ 43 ವರ್ಷಗಳಿಂದ ಇಂಥ ಅವಕಾಶ ಕಲ್ಪಿಸುತ್ತಿದೆ. ರಾಮ, ಕೃಷ್ಣನ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು. ಮುಂದಿನ ವರ್ಷದಿಂದ ಕೃಷ್ಣನ ಹೆಸರು ಇರುವವರನ್ನು ಕರೆದು ಗೌರವಿಸುವ ಕೆಲಸವಾಗಬೇಕು ಎಂದು ಸ್ವಾಮೀಜಿ ಹೇಳಿದರು.ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ವೇದವ್ಯಾಸ ಕಾಮತ್‌, ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ಶರವು ದೇವಳದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಭುವನಾಭಿರಾಮ ಉಡುಪ, ಜಿ.ಕೆ.ಭಟ್‌ ಸೇರಾಜೆ, ಸುಧಾಕರ ರಾವ್‌ ಪೇಜಾವರ, ರತ್ನಾಕರ ಜೈನ್‌, ಲೀಲಾಕ್ಷ ಕರ್ಕೇರ ಮೊದಲಾದವರು ಇದ್ದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್‌.ಪ್ರದೀಪ್‌ ಕುಮಾರ್‌ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.