ಮಹಾಲಕ್ಷ್ಮೀ ಬ್ಯಾಂಕ್ ವಿರುದ್ಧ ಯಾವುದೇ ತನಿಖೆಗೆ ಸ್ವಾಗತ: ಯಶ್ಪಾಲ್ ಸುವರ್ಣ

KannadaprabhaNewsNetwork |  
Published : Nov 07, 2024, 11:51 PM ISTUpdated : Nov 07, 2024, 11:52 PM IST
ಯಶ್ಪಾಲ್‌ | Kannada Prabha

ಸಾರಾಂಶ

ಬ್ಯಾಂಕಿನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿ ಹರಡಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಕಾನೂನು ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಯಶ್ಪಾಲ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಹೊರಿಸಲಾಗಿರುವ ಅವ್ಯವಹಾರದ ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸ್ವಾಗತ ಎಂದು ಬ್ಯಾಂಕ್‌ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.ಬ್ಯಾಂಕಿನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿ ಹರಡಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಕಾನೂನು ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆರೋಪ ಮಾಡುತ್ತಿರುವವರು ಬ್ಯಾಂಕಿನಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಬಗ್ಗೆ ಸಹಕಾರಿ ನ್ಯಾಯಾಲಯದಲ್ಲಿ ಸಾಲ ಮರುಪಾವತಿಗೆ ಆದೇಶ ನೀಡಿದ್ದು, ತಪ್ಪಿದಲ್ಲಿ ಆಸ್ತಿ ಜಪ್ತಿಗೂ ಸೂಚನೆ ನೀಡಿದೆ ಎಂದವರು ಹೇಳಿದ್ದಾರೆ.ಮಹಾಲಕ್ಷ್ಮೀ ಬ್ಯಾಂಕಿನ ಏಳಿಗೆಯನ್ನು ಸಹಿಸದೆ, ತೇಜೋವಧೆಯ ದುರುದ್ದೇಶದಿಂದ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪದ ಮೂಲಕ ಅವರ ಹತಾಶ ಮನಸ್ಥಿತಿ ಬಯಲಾಗಿದೆ. ಈ ಬಗ್ಗೆ ಎಲ್ಲ ದಾಖಲೆಗಳನ್ನು ಒದಗಿಸಲು ಬ್ಯಾಂಕ್‌ ಸಿದ್ಧವಿದೆ ಎಂದಿದ್ದಾರೆ.ಕಾನೂನು ಮೂಲಕ ಉತ್ತರ:

ಮಹಾಲಕ್ಷ್ಮೀ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಆರ್‌ಬಿಐ ನಿಯಮಾವಳಿಯಂತೆ ಸಹಕಾರಿ ತತ್ವದಡಿ ಪಾರದರ್ಶಕ ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದು, ಈ ಬಗ್ಗೆ ರಾಜ್ಯ ಸಹಕಾರ ಇಲಾಖೆ ಅಥವಾ ಇಡಿ, ಸಿಬಿಐ ಅಥವಾ ಇನ್ಯಾವುದೇ ಉನ್ನತ ಮಟ್ಟದ ತನಿಖೆಗೂ ಸಿದ್ಧವಿದೆ ಹಾಗೂ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯಲ್ಲೇ ಉತ್ತರ ನೀಡಲಾಗುವುದು ಎಂದು ಯಶ್ಪಾಲ್‌ ತಿಳಿಸಿದ್ದಾರೆ.------------------ಎಸ್‌ಐಟಿ ಮೂಲಕ ತನಿಖೆಯಾಗಬೇಕು: ರಘುಪತಿ ಭಟ್

ಕನ್ನಡಪ್ರಭ ವಾರ್ತೆ ಉಡುಪಿ

ಮಹಾಲಕ್ಷ್ಮಿ ಕೋ- ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಿಂದ ನಿಯಮ ಮೀರಿ ಸಾಲ ನೀಡಿದ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‍ಐಟಿ) ಮೂಲಕ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆಗ್ರಹಿಸಿದ್ದಾರೆ.2021ರಲ್ಲಿ 100ಕ್ಕೂ ಅಧಿಕ ಮಂದಿಗೆ 2 ಚೆಕ್, ಆಧಾರ್ - ಪಾನ್ ಕಾರ್ಡ್ ಪಡೆದು 20 ಸಾವಿರದಿಂದ 1 ಲಕ್ಷ ರು. ವರೆಗೆ ಸಾಲ ನೀಡಿ, ಇದೀಗ 2 ಲಕ್ಷ ರು. ಸಾಲ ಪಡೆದಿರುವುದಾಗಿ ಹೇಳಿ, ಮರುಪಾವತಿಗೆ ಕಿರುಕುಳ ನೀಡುತ್ತಿದ್ದಾರೆ ಎಂದವರು ಆರೋಪಿಸಿದರು.

9ರಂದು ಅಣೆ ಪ್ರಮಾಣ:

ಈ ವಿಚಾರದ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ನನಗೆ ಕರಂಬಳ್ಳಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವಂತೆ ಆಹ್ವಾನಿಸಿದ್ದು, ಅವರ ಸವಾಲನ್ನು ಸ್ವೀಕರಿಸಿದ್ದೇನೆ. ನ.9ರಂದು ಬೆಳಗ್ಗೆ 9.30ಕ್ಕೆ ಸಂತ್ರಸ್ತರೆಲ್ಲರೂ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿ ಸಂತ್ರಸ್ತರಿಂದ ಆಣೆ ಪ್ರಮಾಣ ಮಾಡಿಸಲು ಬದ್ಧನಾಗಿದ್ದು, ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿಬೇಕು ಎಂದವರು ಹೇಳಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌