ಕನ್ನಡ ಶಾಲೆ ಯಾರೇ ಬಂದ್ ಮಾಡಲು ಮುಂದಾದರೂ ಸಹಿಸಬಾರದು-ಬಸವರಾಜ ಹೊರಟ್ಟಿ

KannadaprabhaNewsNetwork |  
Published : May 26, 2026, 02:00 AM IST
ಹಾವೇರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಪ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಶಾಲೆಗಳನ್ನು ಬಂದ್ ಮಾಡಲು ಬಿಡಬಾರದು. ನಾನು ಹೃದಯದಿಂದ ಈ ಮಾತನ್ನು ಮಾತನಾಡುತ್ತಿದ್ದೇನೆ. ಕನ್ನಡ ಶಾಲೆ ಬಂದ್ ಮಾಡುವ ಕೆಲಸಕ್ಕೆ ಯಾರೇ ಮುಂದಾದರೂ ಸಹಿಸಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹಾವೇರಿ:ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಶಾಲೆಗಳನ್ನು ಬಂದ್ ಮಾಡಲು ಬಿಡಬಾರದು. ನಾನು ಹೃದಯದಿಂದ ಈ ಮಾತನ್ನು ಮಾತನಾಡುತ್ತಿದ್ದೇನೆ. ಕನ್ನಡ ಶಾಲೆ ಬಂದ್ ಮಾಡುವ ಕೆಲಸಕ್ಕೆ ಯಾರೇ ಮುಂದಾದರೂ ಸಹಿಸಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಿರಿಯ ಸಾಹಿತಿ ದಿ.ಗಂಗಾಧರ ನಂದಿ ಪ್ರಧಾನ ವೇದಿಕೆಯಲ್ಲಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ರಾಜ್ಯ ಸಮಿತಿಯಿಂದ ಆಯೋಜಿಸಿದ್ದ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಮ್ಮ ಮಾತೃಭಾಷೆ, ಅದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕೆಲಸ ಹಾವೇರಿ ಜಿಲ್ಲೆಯಿಂದಲೇ ಆರಂಭಗೊಳ್ಳಬೇಕಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ. ಕನ್ನಡಪರ ಸಂಘಟನೆಗಳು, ಕರುನಾಡ ಕನ್ನಡ ಸಾಹಿತ್ಯ ಸಂಘಟನೆಯು ಕನ್ನಡ ಶಾಲೆ ಬಂದ್‌ ಮಾಡುವ ನಿರ್ಧಾರದ ವಿರುದ್ಧ ಕೋರ್ಟ್‌ಗೆ ಹೋಗಬೇಕು. ನಿಮ್ಮ ಪರವಾಗಿ ನಾವಿರುತ್ತೇನೆ ಎಂದರು.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅದನ್ನು ಆಡಳಿತ ಭಾಷೆಯಾಗಿ ಹಾಗೂ ಭಾರತದ ಶಾಸ್ತ್ರೀಯ ಭಾಷೆಯಾಗಿ ಗುರುತಿಸಲಾಗಿದೆ. ಕನ್ನಡಕ್ಕಾಗಿ ಎಷ್ಟೋ ಜನ ಮಹನೀಯರು ತಮ್ಮ ಜೀವವನ್ನೇ ಕೊಟ್ಟಿದ್ದಾರೆ. ಆದರೂ ನಮಗೆ ಭಾಷೆಯ ಬಗ್ಗೆ ಅಭಿಮಾನವಿಲ್ಲ. ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ ಮರಾಠಿ ಬೋರ್ಡ್‌ಗಳಿವೆ. ಆಯಾ ರಾಜ್ಯಗಳಲ್ಲಿ ಭಾಷಾಭಿಮಾನ ಬಹಳ ಇದೆ. ಆದರೆ, ಅಲ್ಲಿರುವ ಅಭಿಮಾನ ಕರ್ನಾಟಕ ಮಾತೃಭಾಷೆ ಮಾತನಾಡುವ ನಮಗೇಕೆ ಇಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಶೇ. 23ರಷ್ಟು ಮಾತ್ರ ಕನ್ನಡ ಭಾಷೆ ಮಾತನಾಡುವ ಜನರಿದ್ದಾರೆ. ಬೆಳಗಾವಿಯಲ್ಲೂ ಕನ್ನಡ ಮಾತನಾಡುತ್ತಾರೆ. ಆದರೆ, ಬಹುಪಾಲು ಜನ ನಮ್ಮವರೇ ಬೇರೆ ಭಾಷೆ ಮಾತನಾಡುತ್ತಾರೆ. ವಿಧಾನ ಪರಿಷತ್ ಕಚೇರಿಯಲ್ಲಿರುವ ಎಲ್ಲರೂ ಸರ್ಕಾರಿ ಕಚೇರಿ ಅವಧಿಯಲ್ಲಿ ಕನ್ನಡವನ್ನೇ ಮಾತನಾಡಬೇಕು. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಆದೇಶ ಹೊರಡಿಸಿದ್ದೇವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳನಮನಿ ಮಾತನಾಡಿ, ನಮ್ಮ ಮನೆಯಿಂದಲೇ ಕನ್ನಡ ಭಾಷೆಯ ಕೊಲೆಯಾಗುತ್ತಿರುವುದು ದುರ್ದೈವ. ಮನೆಯಲ್ಲಿ ಮಕ್ಕಳಿಗೆ ಮಮ್ಮಿ, ಡ್ಯಾಡಿ ಎಂದು ಹೇಳಿಕೊಡುತ್ತೇವೆ. ಅಪ್ಪ, ಅವ್ವ ಎಂದು ಹೇಳುತ್ತಿಲ್ಲ. ಭಾಷೆಗೆ ಗೌರವ ಕೊಡಬೇಕು. ಕನ್ನಡವೇ ನಮ್ಮ ಹೃದಯ. ಭಾಷೆ ಮತ್ತು ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದರು.

ಸಮಾರಂಭದಲ್ಲಿ ಡಾ. ಜಿ.ಎಚ್. ಇಮ್ರಾಪುರ, ಜಿ.ಎಂ. ಮುಂದಿನಮನಿ, ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ನಿಂಗಪ್ಪ ಚಾವಡಿ, ಉಡಚಪ್ಪ ಮಾಳಗಿ, ಬಸವರಾಜ ಹೆಡಿಗ್ಗೊಂಡ, ರವೀಂದ್ರ ಮುದ್ದಿ, ಮಂಜುಳಾ ಅಕ್ಕಿ, ಸೋಮಣ್ಣ ಡೊಂಬರಮತ್ತೂರ, ಅಕ್ಕಮಹಾದೇವಿ ನೀರಲಗಿ, ಬಾಲಚಂದ್ರ ಹೆಗಡೆ, ಎಸ್.ಎಲ್ ಕಾಡದೇವರಮಠ, ಚಂಪಾ ಹುಣಸಿಕಟ್ಟಿ, ಸಂಜಯಗಾಂಧಿ ಸಂಜೀವಣ್ಣವರ, ನಾಗರಾಜ ಎಚ್., ಎಫ್.ಎಚ್‌.ಹುಣಸೀಮರ, ವೈ.ಬಿ ಲಕ್ಷ್ಮಣ, ಲೀಲಾವತಿ ಪಾಟೀಲ, ಕುಮಾರ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಕಲಿಯಬೇಕು. ಮನೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿ, ಮಾತನಾಡಿ ಉಳಿಸಿ ಬೆಳೆಸಬೇಕು. ಕನ್ನಡ ಶಾಲೆಗಳು ಕಡ್ಡಾಯವಾಗಿ ಉಳಿಯಬೇಕು. ಜಿಲ್ಲೆಯಲ್ಲಿ ಅನೇಕ ಸಾಹಿತಿಗಳಿದ್ದು, ಹಾವೇರಿ ಜಿಲ್ಲೆ ಸಮೃದ್ಧಿ ಸಾಹಿತ್ತಿಕ ಕ್ಷೇತ್ರವಾಗಿದೆ. ಇಂತಹ ನಾಡಿನಲ್ಲಿ ಹುಟ್ಟಿದ್ದು ನನ್ನ ಪುಣ್ಯ. ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿರುವುದು ನನ್ನ ಸುಧೈವ. ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗಕ್ಕೆ ಕೃತಜ್ಞತೆ ತಿಳಿಸುವೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಜಿ.ಎಂ ಓಂಕಾರಣ್ಣನವರ ಹೇಳಿದರು.ಸರ್ಕಾರಿ, ಅನುದಾನಿತ, ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳು ರಾಜ್ಯದಲ್ಲಿ ಉಳಿಯಬೇಕು. ಕನ್ನಡ ಶಾಲೆಗಳು ಮುಚ್ಚಲು ಬಿಡಬಾರದು. ಪ್ರತಿಯೊಬ್ಬರ ಮನೆ ಮನಗಳಲ್ಲಿ ಕನ್ನಡದ ದೀಪ ಹಚ್ಚಬೇಕು. ಕನ್ನಡವೇ ಉಸಿರು, ಕನ್ನಡವೇ ಹಸಿರಾಗಬೇಕು. ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಬಳಗದ ಎಲ್ಲ ಸದಸ್ಯರಿಗೂ ಅಭಿನಂದನೆ ತಿಳಿಸುವೆ ಎಂದು ಕರುನಾಡ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ ಹೇಳಿದರು.ಸರ್ವಾಧ್ಯಕ್ಷರ ಮೆರವಣಿಗೆ: ಸಮ್ಮೇಳನ ಉದ್ಘಾಟನೆಗೂ ಮುನ್ನ ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್‌ ಭವನದ ವರೆಗೆ ಸಮ್ಮೇಳನಾಧ್ಯಕ್ಷರನ್ನು ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು. ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ ಚಾಲನೆ ನೀಡಿದರು. ವಿ.ಎಸ್. ಪಾಟೀಲ, ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೊರಗಲ್ಲ ಇದ್ದರು.

ಈ ವೇಳೆ ವಿವಿಧ ಕಲಾ ತಂಡಗಳು ಗಮನ ಸೆಳೆದವು. ಸಮಾರಂಭದಲ್ಲಿ ವಿವಿಧ ಸಾಹಿತಿಗಳ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಕವಿಗೋಷ್ಠಿಗಳು, ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿರಿಗೇರಿ ಕ್ರಾಸ್‌ನಲ್ಲಿ ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟನೆ
ಮನೆಬಿಟ್ಟು ಹೋಗಿದ್ದ ಯುವಕ ಎರಡು ದಶಕದ ಬಳಿಕ ಸ್ವಾಮೀಜಿಯಾಗಿ ಪತ್ತೆ