ಯಾದಗಿರಿ ಕ್ರೀಡಾ ವಸತಿ ನಿಲಯದಲ್ಲಿ ಅಪರಾ ತಪರಾ !

KannadaprabhaNewsNetwork |  
Published : Nov 27, 2023, 01:15 AM IST
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಟೇಬಲ್‌ ಟೆನ್ನಿಸ್‌ ಒಳಾಂಗಣದಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಮಕ್ಕಳಿಗೆ ಆಹಾರ ಪೂರೈಕೆ ಬಗ್ಗೆ ನೀಡಲಾದ ಆರ್ಟಿಐ ಮಾಹಿತಿ. | Kannada Prabha

ಸಾರಾಂಶ

ಕ್ರೀಡಾಪಟುಗಳ ವಸತಿ ನಿಲಯ: ಸಮಸ್ಯೆಗಳ ಆಲಯಮಕ್ಕಳ ಹೆಸರಲ್ಲಿ ಲಕ್ಷಾಂತರ ರು.ಗಳ ಲೂಟಿ: ಆರೋಪಟೇಬಲ್‌ ಟೆನ್ನಿಸ್‌ ಒಳಾಂಗಣವೇ ಕ್ರೀಡಾಪಟುಗಳ ವಾಸಸ್ಥಳ!ಪೌಷ್ಟಿಕ ಆಹಾರ ಪೂರೈಕೆ ಹೆಸರಲ್ಲಿ ಬಿಲ್‌ ಸೃಷ್ಟಿ: ಲಕ್ಷಾಂತರ ರು.ಗಳ ಎತ್ತುವಳಿ

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಹೊರವಲಯದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯ ಅವ್ಯವಸ್ಥೆಗಳ ಆಗರವಾಗಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಶಕ್ತರಾಗುವಂತೆ ತಯಾರು ಮಾಡುವ ಈ ವಸತಿ ನಿಲಯ ಸಮಸ್ಯೆಗಳ ಆಲಯ ಅನ್ನೋ ದೂರುಗಳಿವೆ.

ಕ್ರೀಡಾಮಕ್ಕಳ ಸದೃಢ ಆರೋಗ್ಯ ದೃಷ್ಟಿಯಿಂದ ಸರ್ಕಾರ ಅವರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡುವಂತೆ ಆದೇಶಿಸಿ, ವಾರ್ಷಿಕ ಕೋಟ್ಯಂತರ ರು,ಗಳ ಹಣದ ಅನುದಾನ ನೀಡುತ್ತೆಯಾದರೂ, ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಯಿಂದಾಗಿ ಪೌಷ್ಟಿಕ ಆಹಾರ ಇಲ್ಲಿ ಮರೀಚಿಕೆ ಅನ್ನೋ ಆರೋಪಗಳು ಕೇಳಿ ಬಂದಿವೆ.

ಯಾದಗಿರಿಯ ನಿವಾಸಿ ಮಂಜುನಾಥ್‌ ಯಾದವ್‌ ಆರ್‌ಟಿಐ ಅಡಿ ಮಾಹಿತಿ ಪಡೆದಾಗ, ಕ್ರೀಡಾ ವಸತಿ ನಿಲಯದ ಅವ್ಯವಸ್ಥೆ ಬಟಾ ಬಯಲಾಗಿದೆ. ಕ್ರೀಡಾ ಮಕ್ಕಳಿಗೆಂದು ಮೀಸಲಾದ ಕೋಟ್ಯಂತರ ರುಪಾಯಿಗಳ ಅನುದಾನ ಇಲ್ಲಿ ಗೋಲ್ಮಾಲ್‌ ಆಗಿರುವ ಅನುಮಾನಗಳಿವೆ.

ಜಿಲ್ಲಾ ಕ್ರೀಡಾಂಗಣದ ಮೂಲೆಯಲ್ಲಿರುವ ಟೇಬಲ್‌ ಟೆನ್ನಿಸ್‌ ಒಳಾಂಗಣದಲ್ಲಿ ಇವರ ವಾಸ ಅಚ್ಚರಿ ಮೂಡಿಸುತ್ತದೆ. ವಸತಿ ನಿಲಯ ನಿರ್ಮಾಣ ಹಂತದಲ್ಲಿರುವುದರಿಂದ ತಾತ್ಕಾಲಿಕವಾಗಿ ಟೇಬಲ್‌ ಟೆನ್ನಿಸ್‌ ಒಳಾಂಗಣದಲ್ಲಿ ಮಕ್ಕಳನ್ನು ಇಡಲಾಗಿದೆ ಎಂಬುದಾಗಿ ವರ್ಷಗಳಿಂದ ಅಧಿಕಾರಿಗಳು ನೀಡುತ್ತ ಬಂದಿರುವ ಸಮಜಾಯಿಷಿ ಅನುಮಾನಕ್ಕೆ ಕಾರಣವಾಗಿದೆ. ಆರ್ಟಐ ಅಡಿ ನೀಡಿದ ಮಾಹಿತಿಯಲ್ಲಿ ಐದರಿಂದ 7ಬೇ ತರಗತಿವರೆಗಿನ ಸುಮಾರು 41 ಮಕ್ಕಳು ಇಲ್ಲಿದ್ದಾರೆ.

ಹಾಗೆ ನೋಡಿದರೆ, ಸುರಕ್ಷತೆ ದೃಷ್ಟಿಯಿಂದ ಬಾಲಕ ಮತ್ತು ಬಾಲಕಿಯರನ್ನು ಒಂದೇ ಕಟ್ಟಡದಲ್ಲಿರಿಸಬಾರದು ಎಂಬ ಆದೇಶವಿದ್ದಾಗ್ಯೂ, ಇಲ್ಲಿ ಎಲ್ಲರನ್ನೂ ಕುರಿಹಿಂಡಿನಂತೆ ತುಂಬಿರುವುದು ವಿಚಿತ್ರ.

ಮಕ್ಕಳ ಪೌಷ್ಟಿಕ ಊಟಕ್ಕೇ ಕನ್ನ: ಕ್ರೀಡಾ ಮಕ್ಕಳ ಸದೃಢ ಆರೋಗ್ಯಕ್ಕೆಂದು ಸರ್ಕಾರ ಹಾಲು, ತತ್ತಿ, ಹಣ್ಣು, ಡ್ರೈಫ್ರೂಟ್ಸ್‌, ಜ್ಯೂಸ್‌, ಚಿಕನ್‌ ಊಟ ಸೇರಿದಂತೆ ಪೌಷ್ಟಿಕ ಆಹಾರ ದಿನನಿತ್ಯ ನೀಡಬೇಕು. ವಾಸ್ತವದಲ್ಲಿ ವಾರಕ್ಕೊಮ್ಮೆ ಇಲ್ಲಿ ಸಿಗುವುದೂ ದುರ್ಲಭ. ಸರ್ಕಾರದ ಮೆನ್ಯು ಪಟ್ಟಿ ಕೇವಲ "ನಾಮ್‌ ಕೆ ವಾಸ್ತೆ "ಯಂತೆ ಇಲ್ಲಿ ತೂಗುಹಾಕಿದ್ದಾರೆ ಅನ್ನೋದು ಮಂಜುನಾಥ್‌ ಆರೋಪ.

ಆರ್ಟಿಐ ಅಡಿ ನೀಡಿರವ ಮಾಹತಿಯಂತೆ, ಶಹಾಪುರ ತಾಲೂಕು ಚಾಮನಾಳದ ಶ್ರೀಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥಯು 2022-23ನೇ ಸಾಲಿನಲ್ಲಿ ಆಹಾರ ಪೂರೈಕೆ ಟೆಂಡರ್‌ ಪಡೆದಿತ್ತು. ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ 225 ರು.ಗಳ ನಿಗದಿಪಡಿಸಿತ್ತಾದರೂ, ಬಿಡ್‌ದಾರರು 191 ರು.ಗಳ ದರ ನಮೂದಿಸಿದ್ದರಿಂದ ಟೆಂಡರ್ ನೀಡಲಾಗಿದೆ.

ಪ್ರತಿ ತಿಂಗಳ 1.80 ಲಕ್ಷ ರು.ಗಳಿಂದ 2.20 ಲಕ್ಷ ರು.ಗಳವರೆಗೆ ಮಕ್ಕಳ ಊಟೋಪಹಾರದ ಬಿಲ್‌ ಪಾವತಿ ಮಾಡಲಾಗುತ್ತದೆ. ಅಚ್ಚರಿ ಎಂದರೆ, ಇಲ್ಲಿನ ಸ್ಟೇಷನ್‌ ಬಜಾರ್‌ ಸರ್ಕಾರಿ ಶಾಲೆಯಲ್ಲಿ (ಎಂಪಿಎಸ್‌) ಅಭ್ಯಸಿಸುತ್ತಿರುವ ವಸತಿ ಶಾಲೆಯ ಮಕ್ಕಳು ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನ ಊಟವನ್ನು ಸರ್ಕಾರಿ ಶಾಲೆಯಲ್ಲೇ ಮಾಡುತ್ತಾರಾದರೂ, ಕ್ರೀಡಾ ವಸತಿ ನಿಲಯದಲ್ಲೇ ಈ ಮಕ್ಕಳು ಊಟ ಮಾಡಿದ್ದಾರೆಂದು ಗುತ್ತಿಗೆದಾರರ ಬಿಲ್‌ ಎತ್ತುವಳಿ ಶಂಕೆ ಮೂಡಿಸುತ್ತದೆ. ಕ್ರೀಡಾ ವಸತಿ ನಿಲಯದ ಸಿಬ್ಬಂದಿಗಳೇ ಆಹಾರ ಪೂರೈಸುತ್ತಿದ್ದು, ಗುತ್ತಿಗೆದಾರ ಹಾಗೂ ಇವರ ಮಧ್ಯೆ ಹೊಂದಾಣಿಕೆ ನಡೆದಿದೆ ಎಂಬ ಆರೋಪಗಳಿವೆ.

ಕ್ರೀಡಾ ವಸತಿ ನಿಲಯದ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಊಟ ಮಾಡುತ್ತಾರೆಂದು ಎಂಪಿಎಸ್‌ ಸ್ಟೇಷನ್‌ ಬಜಾರ್ ಶಾಲೆಯ ಮುಖ್ಯೋಫಾಧ್ಯಾಯರು ಅರ್ಜಿಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಹಾಗಿದ್ದಾಗ, ಮಕ್ಕಳ ಹೆಸರಲ್ಲಿ ಊಟದ ಲಕ್ಷಾಂತರ ರು.ಗಳ ಹಣ ಹೋಯಿತೆಲ್ಲಿಗೆ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಮಕ್ಕಳ ಕಂಪ್ಯೂಟರ್‌ ಮಾರಾಟ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಈ ಕ್ರೀಡಾ ವಸತಿ ನಿಲಯದ ಮಕ್ಕಳಿಗೆಂದು ನೀಡಲಾಗಿದ್ದ ಸುಮಾರು 8 ಲಕ್ಷ ರು.ಗಳ ಮೌಲ್ಯದ 10ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಕಾಣುತ್ತಿಲ್ಲ. ತಂತ್ರಜ್ಞಾನ ಕಲಿಕೆಗೆ ಮಕ್ಕಳಿಗೆ ಇದು ಅನುಕೂಲವಾಗಲಿ ಎಂಬ ಸರ್ಕಾರಗಳ ಸದುದ್ದೇಶ ಇಲ್ಲಿ ಮಂಗಮಾಯ. ಈ ಬಗ್ಗೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಾರೆ. ಇನ್ನು, ಮಕ್ಕಳಿಗೆ ಸರ್ಕಾರದ ಕಂಪ್ಯೂಟರ್‌ ವ್ಯವಸ್ಥೆ ಇರುವುದೇ ಗೊತ್ತಿಲ್ಲ.

ಇನ್ನು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಖರೀದಿಸಿರುವುದಾಗಿ ತೋರಿಸಿದ ಜಿಮ್‌ ಸಾಮಗ್ರಿಗಳ ಲೆಕ್ಕ ಪಕ್ಕವಾಗಿಲ್ಲ. ಜಿಮ್‌ ಸಾಮಗ್ರಿಗಳ ಖರೀದಿಯಲ್ಲಿ ಲಕ್ಷಾಂತರ ರುಪಾಯಿಗಳ ಹಣ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಗುತ್ತಿಗೆದಾರರು ಲೂಟಿ ಮಾಡಿದ್ದಾರೆಂದು ಆರೋಪಿಸುವ ಮಂಜುನಾಥ್‌ ಯಾದವ್‌, ತನಿಖೆ ನಡೆದರೆ ಹಗರಣದ ಹೂರಣ ಹೊರಬಹುದು ಎಂದು ಹೇಳುತ್ತಾರೆ.ದಂಗಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ: ನ.28 ರಂದು ಯಾದಗಿರಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಸಂಜೆಯೇ ಯಾದಗಿರಿಗೆ ಆಗಮಿಸಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ, ಮಾರ್ಗಮಧ್ಯೆ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ದಂಗಾಗಿದ್ದಾರೆ.

ಟೇಬಲ್‌ ಟೆನ್ನಿಸ್‌ ಒಳಾಂಗಣದಲ್ಲಿ ಮಕ್ಕಳ ವಾಸ, ಅವರ ಊಟ ವ್ಯವಸ್ಥೆ, ಅಲ್ಲಿನ ತರಬೇತಿ ಮುಂತಾದವುಗಳ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳೊಡನೆ ಅವರು ಮಾಹಿತಿ ಪಡೆದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 26ವೈಡಿಆರ್‌15

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಟೇಬಲ್‌ ಟೆನ್ನಿಸ್‌ ಒಳಾಂಗಣದಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಮಕ್ಕಳಿಗೆ ಆಹಾರ ಪೂರೈಕೆ ಬಗ್ಗೆ ನೀಡಲಾದ ಆರ್ಟಿಐ ಮಾಹಿತಿ.

26ವೈಡಿಆರ್‌16

ಯಾದಗಿರಿ ಕ್ರೀಡಾ ವಸತಿ ನಿಲಯದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಭೇಟಿ ನೀಡಿ, ಮಕ್ಕಳೊಡನೆ ಮಾತನಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ