ಬೆಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿದ್ದ ‘ಗೋ ಗೋ’ ಹೆಸರಿನ ಹೆಣ್ಣು ನಾಯಿ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಪ್ರಾಣಿ ಪ್ರಿಯೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬಿಳೇಕಹಳ್ಳಿಯ ರಂಕಾ ಕಾಲೋನಿ ಅಪಾರ್ಟ್‌ಮೆಂಟ್‌ನಲ್ಲಿ ಫೆ.1ರ ರಾತ್ರಿಯಿಂದ ಫೆ.2ರ ಮುಂಜಾನೆ ನಡುವೆ ಈ ಘಟನೆ ನಡೆದಿದೆ. ಈ ಸಂಬಂಧ ಕೋಡಿಚಿಕ್ಕನಹಳ್ಳಿ ಲೇಕ್‌ವಿವ್ ರೆಸಿಡೆನ್ಸಿ ನಿವಾಸಿ ನಿರ್ಮಲಾ ಎಂಬುವವರು ನೀಡಿದ ದೂರಿನ ಮೇರೆಗೆ ಮೈಕೋ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ನಾಯಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಏನಿದು ದೂರು?:
ನಿರ್ಮಲಾ ನೀಡಿದ ದೂರಿನ ಅನ್ವಯ, ಫೆ.2ರ ಮುಂಜಾನೆ 2 ಗಂಟೆಗೆ ರಂಕಾ ಕಾಲೋನಿ ರಸ್ತೆಯಲ್ಲಿ ನಾನು ಕಾರಿನಲ್ಲಿ ಹೋಗುವಾಗ, ರಂಕಾ ಕಾಲೋನಿ ಅಪಾರ್ಟ್‌ಮೆಂಟ್ ಗೇಟ್ ಬಳಿ ನಾಲ್ವರು ಅಪರಿಚಿತರು ಚೀಲದಲ್ಲಿ ಏನೋ ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ರಂಕಾ ಕಾಲೋನಿ ಅಪಾರ್ಟ್‌ಮೆಂಟ್ ನಿವಾಸಿ, ಸ್ನೇಹಿತ ಜಾಯ್ ದೀಪ್ ಫೆ.5ರಂದು ನನಗೆ ಕರೆ ಮಾಡಿ, ಗೋ ಗೋ ಎಂಬ ನಾಯಿ ಕಾಣೆಯಾಗಿದೆ ಎಂದು ತಿಳಿಸಿದ್ದರು. ನಾಯಿ ಕಾಣೆಯಾದ ಸಮಯದ ಸಿಸಿಟಿವಿ ದೃಶ್ಯ ಸಹ ಡಿಲೀಟ್ ಆಗಿದೆ. ಹೀಗಾಗಿ ಅಪಾರ್ಟ್‌ಮೆಂಟ್ ನಿವಾಸಿಗಳ ಬಗ್ಗೆ ತಮಗೆ ಅನುಮಾನವಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಬಿಬಿಎಂಪಿ ಆಯುಕ್ತರಿಗೂ ದೂರು:
ಗೋ ಗೋ ನಾಯಿ ರಂಕಾ ಕಾಲೋನಿ ಅಪಾರ್ಟ್‌ಮೆಂಟ್‌ನಲ್ಲೇ ಹುಟ್ಟಿ ಬೆಳೆದಿದ್ದು, ಇದೀಗ ಏಕಾಏಕಿ ನಾಪತ್ತೆಯಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೂ ದೂರು ನೀಡಲಾಗಿದೆ. ನಾಯಿ ನಾಪತ್ತೆ ಬಗ್ಗೆ ಪ್ರಶ್ನೆ ಮಾಡಿದರೆ, ಅಪಾರ್ಟ್‌ಮೆಂಟ್ ನಿವಾಸಿಗಳ ಅಸೋಸಿಯೇಷನ್ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮಗೆ ನ್ಯಾಯ ಕೊಡಿಸಬೇಕು ಎಂದು ನಿರ್ಮಲಾ ವಿಡಿಯೋವೊಂದರಲ್ಲಿ ಮನವಿ ಮಾಡಿದ್ದಾರೆ.