ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯ ಸರ್ಕಾರದ ಕಾನೂನನ್ನು ಪಾಲಿಸುವಲ್ಲಿ ಜಿಲ್ಲಾಡಳಿತ, ನಗರಸಭೆ ನಿರ್ಲಕ್ಷ ವಹಿಸುತ್ತಿದ್ದು, ಜನಪ್ರತಿನಿಧಿಗಳಂತೂ ಮಾತೃಭಾಷೆ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ, ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡುವ ಕುರಿತಂತೆ ಇದೇ ಮಾ.25ರಂದು 3ನೇ ಹಂತದ ಹೋರಾಟಕ್ಕಿಳಿಯಲಿದ್ದು ನಗರಸಭೆಗೆ ಮುತ್ತಿಗೆ ಹಾಕ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಜಗದೀಶ ಬಿರಾದಾರ ಎಚ್ಚರಿಸಿದರು.ಈ ಕುರಿತಂತೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂಗಡಿಗಳ ಮೇಲೆ ಆದ್ಯತೆಯಂತೆ ಕನ್ನಡ ನಾಮಫಲಕ ಅಳವಡಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವದು ಪಕ್ಕಾ ಎಂದರು.
ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತು ಜಾಗೃತಿ ಮೂಡುತ್ತಿದೆ ಆದರೆ ಬೀದರ್ ಜಿಲ್ಲೆಯಲ್ಲಿ ಮಾತ್ರ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲೀ ಈ ಕುರಿತು ಕಳಕಳಿ ತೋರಿಸುತ್ತಿಲ್ಲ. ಹಾಗಾದರೆ ನಿಮ್ಮ ಮೇಲೆ ಒತ್ತಡ ಏನಾದರೂ ಇದೆಯಾ? ನೀವು ಕನ್ನಡಿಗರಲ್ವಾ ಎಂದು ಜಗದೀಶ ಬಿರಾದರ ಪ್ರಶ್ನೆ ಮಾಡಿದರು.ಕನ್ನಡ ಭಾಷೆಗೆ ಆದ್ಯತೆ ನೀಡುವದಕ್ಕೆ ಯಾರಿಂದಾದರ ಭಯ ಎದುರಿಸುತ್ತಿದ್ದರೆ, ನಮಗೆ ತಿಳಿಸಿ ಎಲ್ಲರೂ ಕೂಡಿ ಕನ್ನಡ ನಾಮಫಲಕ ಅಳವಡಿಸುವ ಕಾರ್ಯ ಮಾಡೋಣ. ಜನಪ್ರತಿನಿಧಿಗಳು ಸಭೆ ಕರೆದು ಪೌರಾಯುಕ್ತರಿಗೆ ಸೂಚಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿ, ಕರವೇ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗೋಲ್ಲ. ನಮ್ಮ ಮೇಲೆ ಎಷ್ಟೇ ದೂರುಗಳು ದಾಖಲಿಸಿದರೂ ನಾವು ಕನ್ನಡಕ್ಕಾಗಿ ಹೋರಾಟ ನಿಲ್ಲಿಸೋಲ್ಲ ಎಂದು ತಿಳಿಸಿದರು.
ಮಾ.25ರ ವರೆಗೆ ಅಂಗಡಿ ಮುಂಗಟ್ಟುಗಳ ಮೇಲೆ ಶೇ.60ರಷ್ಟು ಕನ್ನಡದಲ್ಲಿನ ನಾಮಫಲಕಗಳು ರಾರಾಜಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು. ಅನ್ಯಭಾಷೆಯ ನಾಮಫಲಕ ಪುಡಿಪುಡಿ ಮಾಡಲಾಗುವುದು ಎಂದರು ತಿಳಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ನಾಡು ನುಡಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತಿದೆ. ಹೀಗಾಗಿ ನಾಡು ನುಡಿ ವಿಷಯ ಬಂದಾಗ ನಮ್ಮ ಮೇಲೆ ಎಷ್ಟೇ ದಾವೆಗಳನ್ನು ಹಾಕಿದರೂ ಹೆದರುವುದಿಲ್ಲ. ದಯವಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಈ ಕಡೆ ಗಮನ ಹರಿಸಬೇಕು. ತಮ್ಮದೇ ಸರ್ಕಾರ ಆದೇಶ ಹೊರಡಿಸಿರುವ ಶೇ. 60ರಷ್ಟು ಆದ್ಯತೆಯಲ್ಲಿ ಕನ್ನಡ ನಾಮಫಲಕ ಅಳವಡಿಕೆಯನ್ನು ತಮ್ಮ ತವರು ಜಿಲ್ಲೆಯಲ್ಲಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿಸಿದರು.
ಜಿಲ್ಲೆಯಲ್ಲಿರುವ ಪೌರಾಡಳಿತ ಸಚಿವ ರಹೀಮ್ ಖಾನ್ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ನಗರಸಭೆ, ಪುರಸಭೆಗಳಿಗೆ ಸೂಚಿಸಿ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಕೆ ಮಾಡಿಸುವಲ್ಲಿ ಮುಂದಾಗದಿರುವದು ಅವರಿಗೆ ಕನ್ನಡದ ಬಗ್ಗೆ ಇರುವ ನಿರ್ಲಕ್ಷ್ಯತೆ ತೋರಿಸುತ್ತದೆ ಎಂದು ಜಗದೀಶ ಬಿರಾದರ್ ಆರೋಪಿಸಿದರು.ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ, ಪ್ರಮುಖರಾದ ಭರತ ಕಾಂಬಳೆ, ವಿಶ್ವನಾಥ ಗೌರ್, ಸಚಿನ್ ಜಟಗೊಂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.