ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ರಾಜ್ಯ ಸರ್ಕಾರದ ನಿರಾಸಕ್ತಿ

KannadaprabhaNewsNetwork | Published : Jun 29, 2024 12:32 AM

ಸಾರಾಂಶ

ಪ್ರತೀ ವರ್ಷ ಜುಲೈ ೧ರಿಂದ ಪ್ರಾರಂಭವಾಗಿ ಮುಂದಿನ ವರ್ಷದ ಜೂನ್ ೩೦ರ ವರೆಗಿನ ಅವಧಿಯ ವಿಮೆ ಇದಾಗಿದ್ದು, ಪ್ರತಿ ವರ್ಷ ಜೂನ್ ೧೫ರಿಂದ ಜುಲೈ೧ರ ವರೆಗೆ ರೈತರಿಗೆ ವಿಮಾ ಕಂತನ್ನು ಕಟ್ಟಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಡಕೆ - ಕಾಳುಮೆಣಸು ಬೆಳೆಗಾರರಿಗೆ ಅನುಕೂಲಕರವಾಗಿದ್ದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳ ಹಾಗೂ ಸರ್ಕಾರದ ನಿರಾಸಕ್ತಿಯ ಬಗ್ಗೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಡಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಮಳೆಗಾಲದಲ್ಲಿ ಕಾಡುವ ಕೊಳೆರೋಗ ಹಾಗೂ ಸೊರಗು ರೋಗಗಳಿಂದಾಗಿ ಸಾಕಷ್ಟು ನಷ್ಟ ಆಗುತ್ತಿತ್ತು. ಪ್ರತೀ ವರ್ಷ ನಷ್ಟಕ್ಕೆ ಪರಿಹಾರ ಕೊಡುವಂತೆ ಮನವಿ ಸಲ್ಲಿಸಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ರೈತರದ್ದಾಗಿತ್ತು. ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ ಈ ಎಲ್ಲಾ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ವ್ಶೆಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಿ ಕೊಡುವಲ್ಲಿ ಸಫಲವಾಗಿದೆ.

ಪ್ರತೀ ವರ್ಷ ಜುಲೈ ೧ರಿಂದ ಪ್ರಾರಂಭವಾಗಿ ಮುಂದಿನ ವರ್ಷದ ಜೂನ್ ೩೦ರ ವರೆಗಿನ ಅವಧಿಯ ವಿಮೆ ಇದಾಗಿದ್ದು, ಪ್ರತಿ ವರ್ಷ ಜೂನ್ ೧೫ರಿಂದ ಜುಲೈ೧ರ ವರೆಗೆ ರೈತರಿಗೆ ವಿಮಾ ಕಂತನ್ನು ಕಟ್ಟಲು ಅವಕಾಶ ನೀಡಲಾಗುತ್ತಿತ್ತು. ಈ ವಿಮಾ ಯೋಜನೆಯ ಒಟ್ಟು ಪರಿಹಾರ ಮೊತ್ತದಲ್ಲಿ ಕೇವಲ ಶೇ.೫ರಷ್ಟು ಪ್ರೀಮಿಯಂ ಹಣವನ್ನು ರೈತರು ತುಂಬಬೇಕಾಗಿತ್ತು. ಉಳಿದಂತೆ ವಿಮಾ ಕಂಪನಿಯು ಬಿಡ್ ಸಲ್ಲಿಸುವ ಪ್ರೀಮಿಯಂ ಹಣದಲ್ಲಿ ಸರಾಸರಿ ಸುಮಾರು ಶೇ.೩೦ರಲ್ಲಿ ಶೇ.೨೫ವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಂಚಿ ತುಂಬಿಕೊಡುತ್ತಿದ್ದವು.

ಆದರೆ ಈ ಪ್ರಮಾಣವನ್ನು ತುಂಬಿಕೊಡುವುದಕ್ಕೆ ನಿರಾಸಕ್ತಿ ತೋರುತ್ತಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಕಳೆದ ವರ್ಷ ಪ್ರೀಮಿಯಂ ಹಣವನ್ನು ತುಂಬುವ ಅವಧಿಯನ್ನು ೧೫ ದಿನಗಳ ಬದಲಿಗೆ ೧ ವಾರಕ್ಕೆ ಇಳಿಸಿತ್ತು. ಹಾಗೆಯೇ ಈ ವರ್ಷ ಕೂಡ ಕೇವಲ ೪ ದಿನಗಳಲ್ಲಿ ರೈತರಿಗೆ ಪ್ರೀಮಿಯಂ ಹಣವನ್ನು ತುಂಬುವ ಅವಕಾಶ ಕಲ್ಪಿಸಿ ಈ ಅತ್ಯಅಲ್ಪ ಸಮಯದಲ್ಲಿ ಅವರಿಗೆ ಸಾಧ್ಯವಾಗದೇ ಹಿಂಜರಿಯುವಂತೆ ಮಾಡಿ ರೈತರಿಗೆ ಅನುಕೂಲಕರವಾಗಿದ್ದ ಈ ಯೋಜನೆಯನ್ನು ಶಾಶ್ವತವಾಗಿ ನಿಲ್ಲಿಸುವ ಚಿಂತನೆಯಲ್ಲಿ ಇದ್ದಂತೆ ಕಂಡುಬರುತ್ತಿದೆ ಎಂದು ಬಾಕಿಸಂ ಸಂಶಯ ವ್ಯಕ್ತಪಡಿಸಿದೆ.

ಸರ್ಕಾರದ ಈ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ ಜಿಲ್ಲಾ ಭಾಕಿಸಂ, ಕಂತನ್ನು ತುಂಬುವ ಕನಿಷ್ಠ ಅವಧಿಯನ್ನು ಇನ್ನೂ ೧೫ ದಿನಗಳಿಗೆ ವಿಸ್ತರಿಸುವಂತೆ ಕೋರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ತೋಟಗಾರಿಕಾ ಇಲಾಖೆಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನಪ್ರತನಿಧಿಗಳೂ ಕೂಡ ಎಚ್ಚೆತ್ತು ರೈತಸ್ನೇಹಿಯಾದ ಇಂತಹ ಬೆಳೆ ವಿಮಾ ಯೋಜನೆಯನ್ನು ರೈತರಿಗೆ ಉಳಿಸಿ ಕೊಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದೆ.

Share this article