ಎಪಿಎಂಸಿ ಮಾರುಕಟ್ಟೆ ದಲ್ಲಾಳಿ ಶೋಷಣೆ ತಡೆಗೆ ಪ್ರತ್ಯೇಕ ಸಭೆ

KannadaprabhaNewsNetwork |  
Published : Nov 23, 2025, 02:45 AM IST
ಸಸಸಸ | Kannada Prabha

ಸಾರಾಂಶ

ರೈತರಿಂದ ಕಮಿಷನ್ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ದಲ್ಲಾಳಿಗಳು ಕಮಿಷನ್ ಪಡೆಯುವಂತೆ ಇಲ್ಲ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಉಪಲೋಕಾಯುಕ್ತ ಬಿ.ವೀರಪ್ಪ ದಾಳಿ ಮಾಡಿ, ತಾಕೀತು ಮಾಡಿದ ಮೇಲೆಯೂ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ಇತ್ಯರ್ಥ ಮಾಡುವ ಪ್ರಯತ್ನ ನಡೆದಿದ್ದು, ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ದಲ್ಲಾಳಿ ಶೋಷಣೆಯ ಇತ್ಯರ್ಥಕ್ಕೆ ಪ್ರತ್ಯೇಕವಾಗಿ ವಿಶೇಷ ಸಭೆ ಕರೆಯಲಾಗಿದೆ.

ಕೊಪ್ಪಳ ಸಮೀಪದಲ್ಲಿ ಬೆಳವಿನಾಳ ಗ್ರಾಮದ ಬಳಿ ಇರುವ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನೂರಕ್ಕೆ ಹತ್ತು ರುಪಾಯಿ ದಲ್ಲಾಳಿ ಪಡೆಯುತ್ತಾರೆ. ಇದು ಬಹಳ ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಈ ಕುರಿತು ಆಕ್ಷೇಪ ವ್ಯಕ್ತವಾದಾಗಲೂ ಅದನ್ನು ಇತ್ಯರ್ಥ ಮಾಡಿಲ್ಲ. ಆದರೆ, ಉಪಲೋಕಾಯುಕ್ತ ಬಿ.ವೀರಪ್ಪ ಕಟ್ಟುನಿಟ್ಟಿನ ಆದೇಶ ಮಾಡಿದ್ದರಿಂದ ಕೊಪ್ಪಳ ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ಈಗ ಶತಾಯ, ಗತಾಯ ಶ್ರಮಿಸುತ್ತಿದ್ದಾರೆಯಾದರೂ ಸಮಸ್ಯೆ ಪರಿಹರಿಸಲು ಆಗುತ್ತಿಲ್ಲ.

ರೈತರಿಂದ ಕಮಿಷನ್ ಪಡೆಯುವುದು ಅಕ್ಷಮ್ಯ ಅಪರಾಧ ಅಷ್ಟೇ ಅಲ್ಲ, ಶಿಕ್ಷಾರ್ಹ ಅಪರಾಧ ಎನ್ನುವುದು ಜಗಜ್ಜಾಹೀರು. ಅಷ್ಟೇ ಯಾಕೆ ಎಪಿಎಂಸಿಯಿಂದಲೇ ಮಾರುಕಟ್ಟೆಯಲ್ಲಿ ಬೋರ್ಡ್ ನೇತು ಹಾಕಲಾಗಿದೆ. ಗೋಡೆ ಬರಹ ಬರೆಸಲಾಗಿದೆ.

ರೈತರಿಂದ ಕಮಿಷನ್ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ದಲ್ಲಾಳಿಗಳು ಕಮಿಷನ್ ಪಡೆಯುವಂತೆ ಇಲ್ಲ. ಹಾಗೊಂದು ವೇಳೆ ಪಡೆದರೆ ದಲಾಲಿ ಅಂಗಡಿಯ ಅನುಮತಿ ರದ್ದು ಮಾಡಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ದಲ್ಲಾಳಿಗಳು ಮಾತ್ರ ಎಂದಿನಂತೆ ತರಕಾರಿ ಸವಾಲು ಮಾಡಿದ ಬಳಿಕ ಕಮಿಷನ್ ತೆಗೆದುಕೊಂಡೇ ರೈತರ ಹಣ ಪಾವತಿ ಮಾಡುತ್ತಿದ್ದಾರೆ. ಇದೆಲ್ಲವು ರಾಜ್ಯ ಉಪಲೋಕಾಯುಕ್ತರ ಆದೇಶ ಅಣಕಿಸುವಂತಾಗಿದೆ.

ನೋಟಿಸ್ ಜಾರಿ:

ಈ ಕುರಿತು ಕನ್ನಡಪ್ರಭದಲ್ಲಿ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆ ಕೊಪ್ಪಳ ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ದಲ್ಲಾಳಿ ಅಂಗಡಿಯ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ರೈತರಿಂದ ಕಮಿಷನ್ ಪಡೆಯದಂತೆ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕವೂ ಕಮಿಷನ್ ಪಡೆಯುತ್ತಿರುವ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿದೆ. ಅಷ್ಟೇ ಅಲ್ಲ, ದಲ್ಲಾಳಿ ಅಂಗಡಿಯವರು ನೀಡಿದ ಬಿಳಿ ಚೀಟಿ, ಪಡೆದಿರುವ ಕಮಿಷನ್ ದಾಖಲೆ ಸಹ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ, ಈ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ದಲ್ಲಾಳಿ ಅಂಗಡಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈತರು ದೂರು ಮತ್ತು ರಾಜ್ಯ ಉಪಲೋಕಾಯುಕ್ತರ ಆದೇಶ ಅಷ್ಟೇ ಪರಿಗಣಿಸುವುದು ಅಲ್ಲ, ನಮ್ಮ ಸಮಸ್ಯೆ ಆಲಿಸುವಂತೆ ಹೇಳಿಕೊಂಡಿದ್ದಾರೆ.

ಹೀಗಾಗಿ, ಈಗ ಕೊಪ್ಪಳ ಎಪಿಎಂಸಿಯಲ್ಲಿ ದಲ್ಲಾಳಿಗಳ ಸಭೆ ಕರೆಯಲಾಗಿದೆ. ರೈತರಿಂದ ಯಾವುದೇ ಕಾರಣಕ್ಕೂ ಕಮಿಷನ್ ಪಡೆಯುವಂತೆ ಇಲ್ಲ. ಉಳಿದಂತೆ ಬೇಡಿಕೆ ಈಡೇರಿಸುವ ಕುರಿತು ಚರ್ಚಿಸಲು ಕೊಪ್ಪಳ ಎಪಿಎಂಸಿ ಅಧಿಕಾರಿಗಳು ಮುಂದಾಗಿದ್ದಾರೆ.

ನ. 24 ರಂದು ದಲ್ಲಾಳಿ ಅಂಗಡಿಯ ಮಾಲಿಕರ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಏನು ಚರ್ಚೆಯಾಗುತ್ತದೆ ಎನ್ನುವುದು ಸದ್ಯದ ಕುತೂಹಲ.

ಬಾಕ್ಸ್ ವೀಳ್ಯೆದೆಲೆ ಮಾರುಕಟ್ಟೆಯಲ್ಲಿಯೂ ಶೋಷಣೆ

ಕೊಪ್ಪಳ ವೀಳ್ಯೆದೆಲೆ ಮಾರುಕಟ್ಟೆಯಲ್ಲಿಯೂ ರೈತರ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಎಪಿಎಂಸಿಯಿಂದ ಪರವಾನಗಿಯನ್ನೇ ಪಡೆಯದೇ ವೀಳ್ಯದೆಲೆ ಮಾರುಕಟ್ಟೆಯನ್ನು ಹತ್ತಾರು ವರ್ಷಗಳಿಂದ ನಡೆಸುತ್ತಿದ್ದಾರೆ. ಈ ಕುರಿತು ರೈತರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

₹10 ಕಮಿಷನ್ ಪಡೆಯುವುದು ಅಲ್ಲದೆ ಪ್ರತಿ ವೀಳ್ಯದೆಲೆ ಫೆಂಡಿಗೆ ₹200 ಕಡಿಮೆ ಹಾಕಿ ಕೊಡುತ್ತಾರೆ. ಕೂಗಿದ್ದ ಸವಾಲಿಗಿಂತಲೂ ₹200 ಕಡಿಮೆ ನೀಡುತ್ತಿದ್ದಾರೆ. ಈ ಕುರಿತು ಎಪಿಎಂಸಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ದಾಳಿ ಮಾಡಿದ್ದು ಅಲ್ಲದೆ, ತಕ್ಷಣ ಪರವಾನಗಿ ಪಡೆಯಬೇಕು. ಇಲ್ಲದಿದ್ದರೆ ಸವಾಲು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೊಪ್ಪಳ ತರಕಾರಿ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಪಡೆಯುತ್ತಿರುವುದನ್ನು ತಡೆಯುವುದಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ. ಆದರೂ ಕೊನೆಯ ಎಚ್ಚರಿಕೆಯಾಗಿ ದಲ್ಲಾಳಿ ಅಂಗಡಿಯ ಮಾಲಿಕರ ಸಭೆ ಕರೆಯಲಾಗಿದೆ. ವೀಳ್ಯದೆಲೆ ಮಾರುಕಟ್ಟೆಯಲ್ಲಿಯೂ ಕ್ರಮ ವಹಿಸಲಾಗಿದೆ ಎಂದು ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಹಿರೇಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ