ಪಟ್ಟಣದ ಶಿಕ್ಷಣ ಹಳ್ಳಿ ಮಕ್ಕಳಿಗೂ ಸಿಗುವಂತಾಗಲಿ

KannadaprabhaNewsNetwork | Published : Apr 27, 2025 1:35 AM

ಸಾರಾಂಶ

ಪಟ್ಟಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಶುಲ್ಕ ಭರಿಸುವ ಸಾಮರ್ಥ ಹೊಂದಿರುತ್ತಾರೆ, ಹಾಗಾಗಿ ಅವರು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಸೇರಿದಂತೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಗ್ರಾಮೀಣ ಪ್ರದೇಶದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತಾಲೂಕುಮಟ್ಟದಲ್ಲಿ ಬೋಧನಾ ಕೇಂದ್ರ ತೆರೆಯುವ ಮೂಲಕ ಪಟ್ಟಣ ಪ್ರದೇಶದ ಮಕ್ಕಳಿಗೆ ದೊರಕುವ ಶಿಕ್ಷಣ ಹಳ್ಳಿ ಮಕ್ಕಳಿಗೂ ಸಿಗುವಂತಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಚಿ ಎಂ.ಬಿ. ಚೇತನ್ ಹೇಳಿದರು.

ತಾಲೂಕಿನ ಬನ್ನೂರಿನ‌ ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಬನ್ನೂರು ಗ್ರಾಮಾಂತರ ಘಟಕದ ವತಿಯಿಂದ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಶುಲ್ಕ ಭರಿಸುವ ಸಾಮರ್ಥ ಹೊಂದಿರುತ್ತಾರೆ, ಹಾಗಾಗಿ ಅವರು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಸೇರಿದಂತೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ಮಕ್ಕಳಿದ್ದರೂ ಉನ್ನತ ಶಿಕ್ಷಣಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಹಳ್ಳಿ ಮಕ್ಕಳಿಗೂ ದೊರಕಬೇಕೆಂಬ ಆಶಯ ನನ್ನದಾಗಿದ್ದು, ತಾಲೂಕು ಮಟ್ಟದಲ್ಲಿ ಐಎಎಸ್, ಕೆಎಎಸ್ ಹಾಗೂ ಐಪಿಎಸ್ ನಂತಹ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಸೆಂಟರ್ ಗಳನ್ನು ತಾಲೂಕು ಮಟ್ಟದಲ್ಲಿ ಆರಂಭಿಸಬೇಕು. ಆಮೂಲಕ ರೈತರು ಹಾಗೂ ಬಡ ಜನರ ಶಿಕ್ಷಣಕ್ಕೆ ಅನುಕೂಲಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕು. ಇದಕ್ಕಾಗಿ ನಾವೆಲ್ಲರೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವ ಕೆಲಸ ಮಾಡಬೇಕು ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಪ್ತ ಸಲಹೆಗಾರ ಟಿ.ವಿ. ಗೋಪಿನಾಥ್ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮಾತನಾಡಿದರು.

ಬನ್ನೂರಿನ ಸಂತೇ ಮಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಸಸಿ ವಿತರಿಸಲಾಯಿತು.

ಕನ್ನಡ ಸಾಹಿತ್ಯ ಕಲಾಕೂಟದ ಎಂ. ಚಂದ್ರಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೂಳೇಗೌಡ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಶ್, ಸಾಮಾಜಿಕ ವಲಯ ಅರಣ್ಯ ವಲಯದ ಗಸ್ತು ಅರಣ್ಯಪಾಲಕ ಚನ್ನಬಸವಯ್ಯ, ಲಿಂಗಣ್ಣ, ಅರುಣ್ ಕುಮಾರ್, ಗಿರಿರಾಜ್, ಸೂರಿ, ಶಂಕರ್, ರಂಗರಾಜು, ಕುಳ್ಳೇಗೌಡ, ಮಹೇಶ್ ಇದ್ದರು.

------------------

Share this article