ಅಕ್ರಮ ಚಟುವಟಿಕೆ ತಾಣವಾದ ಎಪಿಎಂಸಿ ಗೋದಾಮು!

KannadaprabhaNewsNetwork |  
Published : Jul 07, 2025, 11:48 PM IST
ಎಪಿಎಂಸಿ | Kannada Prabha

ಸಾರಾಂಶ

ಎಪಿಎಂಸಿಯು ಬರೋಬ್ಬರಿ ₹4.24 ಕೋಟಿ ಖರ್ಚು ಮಾಡಿ 2021ರಲ್ಲಿ ಇದನ್ನು ನಿರ್ಮಿಸಿದೆ. ಈರುಳ್ಳಿ ಹಾಗೂ ಆಲೂಗಡ್ಡೆ ಕೆಡದಂತೆ ಸಂಗ್ರಹಿಸಿಡಲು ಪ್ರತ್ಯೇಕವಾದ ಜಾಗೆ ಮೀಸಲು ಮಾಡಿ ನಿರ್ಮಿಸಲಾಗಿದೆ. ಈವರೆಗೆ ಬರೋಬ್ಬರಿ ಎಂಟ್ಹತ್ತು ಸಲ ಬಾಡಿಗೆ ಕೊಡಲು ಟೆಂಡರ್ ಕರೆಯಲಾಗಿದೆ. ಆದರೆ ಯಾರೊಬ್ಬರೂ ಇದನ್ನು ಬಾಡಿಗೆ ತೆಗೆದುಕೊಳ್ಳಲು ಮುಂದೆ ಬಂದಿಲ್ಲ. ಹೀಗಾಗಿ ಇದು ಅಕ್ಷರಶಃ ಪಾಳು ಕಟ್ಟಡದಂತಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ₹4 ಕೋಟಿಗೂ ಅಧಿಕ ಖರ್ಚು ಮಾಡಿ ನಿರ್ಮಿಸಿದ ಈರುಳ್ಳಿ ಆಲೂಗಡ್ಡೆ ಸಂಗ್ರಹಗಾರ ಇಂದು ಅಕ್ಷರಶಃ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಈವರೆಗೂ ಒಂದೇ ಒಂದು ಕೇಜಿ ಈರುಳ್ಳಿ ಆಗಲಿ, ಆಲೂಗಡ್ಡೆಯಾಗಲಿ ಇಲ್ಲಿ ಸಂಗ್ರಹ ಮಾಡಿಟ್ಟಿಲ್ಲ.

ಏಷಿಯಾದಲ್ಲೇ 2ನೆಯ ದೊಡ್ಡ ಎಪಿಎಂಸಿ ಎನಿಸಿರುವ ಹುಬ್ಬಳ್ಳಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಿರ್ಮಿಸಿರುವ ಬೃಹತ್‌ ಈರುಳ್ಳಿ- ಆಲೂಗಡ್ಡೆ ಗೋದಾಮಿನ ದುಸ್ಥಿತಿ ಇದು.

ಈ ಎಪಿಎಂಸಿಯಲ್ಲಿ ಆವಕವಾಗುವ ಕೃಷಿ ಉತ್ಪನ್ನಗಳಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆ ಪ್ರಮುಖ ಬೆಳೆಗಳು. ಕೆಲವೊಂದು ಸಲ ಈರುಳ್ಳಿಗೆ ಬೆಲೆ ಬಾರದೇ ರೈತರು ರಸ್ತೆಗೆ ಎಸೆದು ಹೋಗುವುದುಂಟು. ಆ ವೇಳೆ ಈರುಳ್ಳಿ ಸಂಗ್ರಹಿಸಿಡಲು ಮತ್ತು ಮುಂದೆ ದರ ಬಂದಾಗ ಮಾರಾಟ ಮಾಡಲು ಅನುಕೂಲವಾಗಲೆಂಬ ಉದ್ದೇಶದಿಂದ ದೊಡ್ಡದಾದ ಈ ಗೋದಾಮು ನಿರ್ಮಿಸಲಾಗಿದೆ.

ಎಪಿಎಂಸಿಯು ಬರೋಬ್ಬರಿ ₹4.24 ಕೋಟಿ ಖರ್ಚು ಮಾಡಿ 2021ರಲ್ಲಿ ಇದನ್ನು ನಿರ್ಮಿಸಿದೆ. ಈರುಳ್ಳಿ ಹಾಗೂ ಆಲೂಗಡ್ಡೆ ಕೆಡದಂತೆ ಸಂಗ್ರಹಿಸಿಡಲು ಪ್ರತ್ಯೇಕವಾದ ಜಾಗೆ ಮೀಸಲು ಮಾಡಿ ನಿರ್ಮಿಸಲಾಗಿದೆ. ಈವರೆಗೆ ಬರೋಬ್ಬರಿ ಎಂಟ್ಹತ್ತು ಸಲ ಬಾಡಿಗೆ ಕೊಡಲು ಟೆಂಡರ್ ಕರೆಯಲಾಗಿದೆ. ಆದರೆ ಯಾರೊಬ್ಬರೂ ಇದನ್ನು ಬಾಡಿಗೆ ತೆಗೆದುಕೊಳ್ಳಲು ಮುಂದೆ ಬಂದಿಲ್ಲ. ಹೀಗಾಗಿ ಇದು ಅಕ್ಷರಶಃ ಪಾಳು ಕಟ್ಟಡದಂತಾಗಿದೆ.

ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಕಟ್ಟಡದೊಳಗೆಲ್ಲ ಗಿಡಕಂಟೆಗಳು ಬೆಳೆದಿವೆ. ದುರ್ನಾತ ಬೀರುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಣ್ಣಿಗೆ ರಾಚುತ್ತವೆ. ಕೆಲವೊಂದಿಷ್ಟು ನಿರೋಧದ ಪಾಕೆಟ್‌ಗಳು ಗೋಚರಿಸುತ್ತಿರುವುದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತವೆ.

ಕಟ್ಟಡದ ಸುತ್ತಮುತ್ತಲೂ ಬೇರೆ ಯಾವುದೇ ಕಟ್ಟಡಗಳಿಲ್ಲ. ಸುತ್ತಲೂ ಖಾಲಿ ಜಾಗವೇ ಇವೆ. ಹೀಗಾಗಿ ಅಕ್ರಮ ಚಟುವಟಿಕೆಗಳಿಗೆ ಈ ಜಾಗೆ ಹೇಳಿ ಮಾಡಿಸಿದಂತಾಗಿದೆ.

ಅವಧಿ ಮೀರಿದ ಔಷಧಿ: ಇನ್ನು ಬರೀ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಉಳಿದಿಲ್ಲ. ಯಾವ ಆಸ್ಪತ್ರೆಯವರೋ ಅಥವಾ ಮೆಡಿಕಲ್‌ ಶಾಪ್‌ನವರೋ ತಂದು ಎಸೆಯುತ್ತಾರೋ ಗೊತ್ತಿಲ್ಲ. ಕಟ್ಟಡದ ಸುತ್ತಲೂ ಅವಧಿ ಮೀರಿದ ಔಷಧಿಗಳ ಸ್ಯಾಚೇಟ್‌, ಸ್ಟ್ರಿಪ್‌ಗಳ ರಾಶಿ ರಾಶಿ ಇಲ್ಲಿ ಬಿದ್ದಿವೆ.

ಎಪಿಎಂಸಿ ಆಡಳಿತ ಮಂಡಳಿ ಇಲ್ಲಿಗೆ ಒಮ್ಮೆಯಾದರೂ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅಷ್ಟೊಂದು ಅವ್ಯವಸ್ಥಿತವಾಗಿದ್ದರೂ ಒಂದೇ ಒಂದು ಬಾರಿ ಅದನ್ನು ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ.

ಯಾಕೆ ಹೋಗುತ್ತಿಲ್ಲ: ಈರುಳ್ಳಿ ಮತ್ತು ಆಲೂಗಡ್ಡೆ ಮಾರುಕಟ್ಟೆಯಿಂದ ದೂರ ಇರುವ ಕಾರಣ ಯಾರೊಬ್ಬರು ಇದನ್ನು ಗೋದಾಮಾಗಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ ಎಂಬ ಮಾತು ವರ್ತಕರದ್ದು. ಇಲ್ಲಿ ಬರೀ ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಅವು ಕೆಡದಂತೆ ಸಂಗ್ರಹಿಸಿಡುವ ತಂತ್ರಜ್ಞಾನ ಇನ್ನಷ್ಟು ಅಳವಡಿಸಬೇಕಿತ್ತು. ಆಗ ಇದನ್ನು ಯಾರಾದರೂ ಖಾಸಗಿಯವರು ಬಾಡಿಗೆಗೆ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಎಪಿಎಂಸಿ ಇದನ್ನು ಮತ್ತಷ್ಟು ರಿಪೇರಿ ಮಾಡಬೇಕು ಪ್ರಜ್ಞಾವಂತರ ಆಗ್ರಹ.

ಇನ್ನಾದರೂ ಎಪಿಎಂಸಿ ಕಾರ್ಯದರ್ಶಿಗಳು ಸೇರಿದಂತೆ ಅಧಿಕಾರಿ ವರ್ಗ ಈ ಕಟ್ಟಡದ ಸುತ್ತಲೂ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಬೇಕು. ಅವಧಿ ಮೀರಿದ ಔಷಧಿ ಸೇರಿದಂತೆ ಇತರೆ ತ್ಯಾಜ್ಯ ಎಸೆಯದಂತೆ ನೋಡಿಕೊಳ್ಳಬೇಕು. ಜತೆಗೆ ಬರೀ ಸಂಗ್ರಹಣಕಾರರು ಸಂಸ್ಕರಣಾ ಘಟಕವನ್ನಾಗಿ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ರೈತರು, ಸಾರ್ವಜನಿಕರು ಆಗ್ರಹಿಸುತ್ತಾರೆ.

ಈರುಳ್ಳಿ- ಆಲೂಗಡ್ಡೆ ಸಂಗ್ರಹಣಾ ಗೋದಾಮನ್ನು 2021ರಲ್ಲೇ ₹4.24 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ. ಅಕ್ರಮ ಚಟುವಟಿಕೆ ತಾಣವಾಗಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಅದನ್ನು ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ವರ್ತಕ ರಮೇಶ ಪಾಟೀಲ ಹೇಳಿದರು.ಎಪಿಎಂಸಿಗೆ ಬರುವ ರೈತರಿಗೆ ಮೂಲಸೌಲಭ್ಯ ಸಿಗುವಂತೆ ಮಾಡಬೇಕು. ಆಲೂಗಡ್ಡೆ ಮತ್ತು ಈರುಳ್ಳಿ ಸಂಗ್ರಹಣ ಗೋದಾಮು ನಿರುಪಯುಕ್ತವಾಗಿದೆ. ಅದು ಬಳಕೆಗೆ ಬರುವಂತಾಗಬೇಕು. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಎಪಿಎಂಸಿ ಎಷ್ಟು ಅಭಿವೃದ್ಧಿ ಪಡಿಸುತ್ತಾರೋ ಅಷ್ಟು ರೈತರಿಗೆ, ಜನರಿಗೆ ಅನುಕೂಲವಾಗುತ್ತದೆ ಎಂದು ಎಪಿಎಂಸಿಯಲ್ಲಿರುವ ಕಿರಾಣ ಸ್ಟೋರ್ಸ್‌ನ ಶ್ರವಣ ಪಟೇಲ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಿಂದ ಭೂರಹಿತರಿಂದ ಹೋರಾಟಕ್ಕೆ ನಿರ್ಣಯ
ಚಿನ್ನಕ್ಕಿಂತ ಆರೋಗ್ಯ, ನೆಮ್ಮದಿ ಮುಖ್ಯ: ಮಹಂತೇಶ್‌