ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಎಪಿಎಂಸಿಗಳು

KannadaprabhaNewsNetwork | Published : Jun 10, 2024 2:02 AM

ಸಾರಾಂಶ

ಬೀರೂರು, ಜಿಲ್ಲೆಯ ಎಪಿಎಂಸಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸದ್ಯ ಇರುವವರ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಿ ಹಲವಾರು ಪ್ರಮುಖ ಕೆಲಸಗಳು ಬಾಕಿ ಉಳಿದುಕೊಳ್ಳುತ್ತಿವೆ. ಜಿಲ್ಲೆಯ ಎಪಿಎಂಸಿ ಸಹಾಯಕ ನಿರ್ದೇಶಕ ಕಚೇರಿ ಸೇರಿದಂತೆ ಐದು ಎಪಿಎಂಸಿಗಳಲ್ಲೂ ಮಾರುಕಟ್ಟೆಗಳಿದ್ದರೂ ಬಹುಬೇಡಿಕೆಯ 51 ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯಗಳಿಗೆ ಸಾಕಷ್ಟು ಪರಿತಪಿಸುವಂತಾಗಿದೆ.

ಚಿಕ್ಕಮಗಳೂರಿಗೆ 12 ವರ್ಷದಿಂದ ಕೃಷಿ ಮಾರುಕಟ್ಟೆ ಸಿಬ್ಬಂದಿ ನೇಮಕವೇ ಮಾಡಿಲ್ಲ । ಕಳೆದ 3 ವರ್ಷದಿಂದ ಆಡಳಿತ ಮಂಡಳಿಯೇ ಇಲ್ಲ: ಅಭಿವೃದ್ಧಿಗೆ ತೊಡಕುಬೀರೂರು ಎನ್. ಗಿರೀಶ್

ಕನ್ನಡಪ್ರಭ ವಾರ್ತೆ,ಬೀರೂರು

ಜಿಲ್ಲೆಯ ಎಪಿಎಂಸಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸದ್ಯ ಇರುವವರ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಿ ಹಲವಾರು ಪ್ರಮುಖ ಕೆಲಸಗಳು ಬಾಕಿ ಉಳಿದುಕೊಳ್ಳುತ್ತಿವೆ. ಜಿಲ್ಲೆಯ ಎಪಿಎಂಸಿ ಸಹಾಯಕ ನಿರ್ದೇಶಕ ಕಚೇರಿ ಸೇರಿದಂತೆ ಐದು ಎಪಿಎಂಸಿಗಳಲ್ಲೂ ಮಾರುಕಟ್ಟೆಗಳಿದ್ದರೂ ಬಹುಬೇಡಿಕೆಯ 51 ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯಗಳಿಗೆ ಸಾಕಷ್ಟು ಪರಿತಪಿಸುವಂತಾಗಿದೆ.ಈಗಾಗಲೇ ಹಲವು ಎಪಿಎಂಸಿಗಳಲ್ಲಿ ಕೆಲಸಗಳಿಗೆ ಹೊರಗುತ್ತಿಗೆ ನೀಡುತ್ತಿದೆ. ಚಿಕ್ಕಮಗಳೂರು, ಕಡೂರಿನಂತಹ ದೊಡ್ಡ ಎಪಿಎಂಸಿಗಳು ಬಾಡಿಗೆ ಹಾಗೂ ಇತರೆ ಆದಾಯ ಮೂಲಗಳನ್ನು ಸೃಷ್ಟಿಸಿ ಕೊಂಡಿದ್ದು, ಅದರ ಖರ್ಚು ವೆಚ್ಚ ನೋಡಿಕೊಳ್ಳುತ್ತಿದೆ. ಅದರೆ ಸಣ್ಣಪುಟ್ಟ ಎಪಿಎಂಸಿಗಳು ಆದಾಯವಿಲ್ಲದೆ ಸೊರಗಿದ್ದು. ಹೊರಗುತ್ತಿಗೆ ನೀಡಲೂ ಹಣವಿಲ್ಲದಂತಾಗಿದೆ. ಜಿಲ್ಲೆಯ ಎಪಿಎಂಸಿಗಳಲ್ಲಿ ಮಂಜೂರಾದ 68 ಹುದ್ದೆಗಳಲ್ಲಿ 17 ಹುದ್ದೆಗಳ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಭದ್ರತಾ ಸಿಬ್ಬಂದಿ, ಚಾಲಕ, ಕಂಪ್ಯೂಟರ್ ಡೇಟಾ ಅಪರೇಟರ್, ಎಲೆಕ್ಟ್ರಿಷಿ ಯನ್, ಪ್ಲಂಬರ್ ಹಾಗೂ ಸ್ವಚ್ಚತಾ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಜವಾಬ್ದಾರಿಯುತ ಅಧಿಕಾರಿಗಳ ಮಟ್ಟದ ಸಿಬ್ಬಂದಿ ಇಲ್ಲದೇ ಈ ಕೆಲಸಕ್ಕೆ ಹೊರ ಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗದೇ ಎಷ್ಟು ಸಾಧ್ಯವೋ ಅಷ್ಟು ಕೆಲಸಗಳನ್ನು ಇರುವ ಅಧಿಕಾರಿ ಸಿಬ್ಬಂದಿಯೇ ಮಾಡುವಂತಾಗಿದೆ. ಹೆಚ್ಚುವರಿ ಕೆಲಸಕ್ಕೆ ಯಾವುದೇ ಹೆಚ್ಚುವರಿ ಸಂಭಾವನೆ ಇಲ್ಲದೇ ಮಾನಸಿಕ ಮತ್ತು ದೈಹಿಕವಾಗಿ ಶ್ರಮಿಸುವಂತಾಗಿದೆ. ರೈತರು ತಾವು ಬೆಳೆದ ದವಸ ಧಾನ್ಯಗಳು, ಅಡಕೆ, ಕೊಬ್ಬರಿ ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳನ್ನು ಎಪಿಎಂಸಿಗಳಿಗೆ ತಂದು ಮಾರುತ್ತಾರೆ. ಇಲ್ಲಿ ವರ್ತಕರು, ದಲ್ಲಾಳಿಗಳಿಂದ ರೈತರಿಗೆ ಯಾವುದೇ ರೀತಿ ಮೋಸ ಆಗದಂತೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ಹಾಗೆ ನೋಡಿಕೊಳ್ಳುವುದು ಎಪಿಎಂಸಿ ಜವಾಬ್ದಾರಿ. ಸಂಪೂರ್ಣ ಲೆಕ್ಕ ಇಡುವುದು, ವಿಂಗಡಿಸುವುದು ತೂಕ, ಬೆಲೆಯಲ್ಲಾಗಲೀ ಮೋಸವಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಗೋದಾಮುಗಳ ನಿರ್ವಹಣೆ, ಹರಾಜು ಪ್ರಕ್ರಿಯೆ ರೈತರ ವರ್ತಕರ ನೋಂದಣಿ ಹೊಸ ಲೈಸೆನ್ಸ್ ನೀಡಿಕೆ, ನವೀಕರಣ ಇನ್ನೂ ಅನೇಕ ಕೆಲಸಗಳ ಹೊಣೆ ಗಾರಿಕೆ ಎಪಿಎಂಸಿ ಸಿಬ್ಬಂದಿ ಮೇಲಿರುವುದರಿಂದ ಈ ಎಲ್ಲ ನಿರ್ವಹಣೆ ಸುಸೂತ್ರವಾಗಲು ಸಿಬ್ಬಂದಿ ಅವಶ್ಯಕತೆ ಹೆಚ್ಚಿದೆ. ಮಂಜೂರಾದ ಹುದ್ದೆಗಳಿಗೆ ಕಳೆದ 12 ವರ್ಷದಿಂದ ಸಿಬ್ಬಂದಿಯನ್ನು ರಾಜ್ಯ ಸರಕಾರ ಭರ್ತಿ ಮಾಡದೆ ಹಾಗೆಯೇ ಉಳಿಸಿಕೊಂಡಿದೆ. ಬಹುಮುಖ್ಯವಾಗಿ ಕಳೆದ 3 ವರ್ಷದಿಂದ ಆಡಳಿತ ಮಂಡಳಿಯೇ ಇಲ್ಲದೆ ಅಭಿವೃದ್ಧಿಗೂ ತೊಡಕಾಗಿದ್ದು ಜೊತೆಗೆ ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಎಪಿಎಂಸಿಗಳಿಗೆ ಸರಕಾರ ಬಲ ತುಂಬಬೇಕಿದೆ. ಕಡೂರಲ್ಲಿ ಕೇವಲ 7 ಸಿಬ್ಬಂದಿಯಿಂದ ಕೆಲಸ:

ಬೆಂಗಳೂರು-ಹೊನ್ನಾವರ ಮಾರ್ಗದ ರಾಜ್ಯ ಹೆದ್ದಾರಿ ಮಾರ್ಗದ ಜಿಲ್ಲೆಯ ಅತಿದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಪಡೆದ ಕಡೂರು ಎಪಿಎಂಸಿಯಲ್ಲಿ ವಿವಿಧ 22 ಹುದ್ದೆಗಳಿದ್ದರೂ ಇರುವ ಕೇವಲ 7 ಜನ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ. ಆದರೆ ಜಿಲ್ಲೆಗಿಂತ ಕಡೂರಿನಲ್ಲಿಯೇ ಅತಿಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಸಮಾಧಾನಕರ ಸಂಗತಿಯೂ ಆಗಿದೆ.

ಆದರೆ ವಾಸ್ತವವಾಗಿ ನಿಗದಿತ ಕೆಲಸದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡುವಂತಾಗಿದೆ. ಮಾರುಕಟ್ಟೆಯಲ್ಲಿ ಮಾಡಬೇಕಿರುವ ಬಹಳಷ್ಟು ಕೆಲಸಗಳಿವೆ. ಜೊತೆಯಲ್ಲಿ ಕಡೂರು ತಾಲೂಕಿನ ವ್ಯಾಪ್ತಿ ಬೆಳೆದಂತೆ ಬೀರೂರು, ಅಂತರಘಟ್ಟೆ ಹಾಗೂ ಪಂಚನಹಳ್ಳಿ ಎಪಿಎಂಸಿಗಳ ಉಪ ಮಾರುಕಟ್ಟೆಗಳಲ್ಲಿಯೂ ಸಿಬ್ದಂದಿ ಕೊರತೆ ಎದುರಿಸುವಂತಾಗಿದೆ.ಜಿಲ್ಲೆಯಲ್ಲಿನ ಎಪಿಎಂಸಿಗಳಲ್ಲಿ ಖಾಲಿ ಹುದ್ದೆಗಳು ಎಪಿಎಂಸಿಗಳು ಇರುವ ಹುದ್ದೆಗಳು ಖಾಲಿ ಹುದ್ದೆಗಳು*ಚಿಕ್ಕಮಗಳೂರು

ಎಪಿಎಂಸಿ ಸಹಾಯಕ ನಿರ್ದೇಶಕರ ಕಚೇರಿ 7 6*ಚಿಕ್ಕಮಗಳೂರು ಎಪಿಎಂಸಿ 9 5*ಕಡೂರು 22 15*ತರೀಕೆರೆ 14 11*ಮೂಡಿಗೆರೆ 8 7*ಕೊಪ್ಪ 8 7

ಜಿಲ್ಲೆಯ ಒಟ್ಟು ಐದು ಎಪಿಎಂಸಿಗಳಲ್ಲಿ 51 ಸಿಬ್ಬಂದಿ ಕೊರತೆಯಿದ್ದು, ತಾವು ಕೂಡ ಕಳೆದ ಒಂದೂವರೆ ತಿಂಗಳಿನಿಂದ ಸಹಾಯಕ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿ ಸಮಸ್ಯೆಯಿಂದ ಸಾಕಷ್ಟು ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. - ವಿಶ್ವನಾಥರೆಡ್ಡಿ,

ಸಹಾಯಕ ನಿರ್ದೇಶಕರು

ಚಿಕ್ಕಮಗಳೂರು ಎಪಿಎಂಸಿ

8 ಬೀರೂರು 2(ಕಡೂರು ಪಟ್ಟಣದಲ್ಲಿರುವ ಎಪಿಎಂಸಿ ಮಾರುಕಟ್ಟೆ)

Share this article