ಕಾಂಗ್ರೆಸ್‌ ಅಭ್ಯರ್ಥಿಗೆ ಆಪ್‌ ಬೆಂಬಲ!

KannadaprabhaNewsNetwork | Published : Apr 3, 2024 1:34 AM

ಸಾರಾಂಶ

ಇಂಡಿಯಾ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಆಮ್‌ ಆದ್ಮಿ ಪಕ್ಷವೂ ಈ ಸಲ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಆಪ್‌ ಪಕ್ಷಗಳೆರಡು ಸೇರಿಕೊಂಡು ಪ್ರಚಾರ ನಡೆಸುತ್ತಿವೆ.

ಹುಬ್ಬಳ್ಳಿ:

ಇಂಡಿಯಾ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಆಮ್‌ ಆದ್ಮಿ ಪಕ್ಷವೂ ಈ ಸಲ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಆಪ್‌ ಪಕ್ಷಗಳೆರಡು ಸೇರಿಕೊಂಡು ಪ್ರಚಾರ ನಡೆಸುತ್ತಿವೆ.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾಂಗ್ರೆಸ್‌ನ ಧಾರವಾಡ ಲೋಕಸಭಾ ಕ್ಷೇತ್ರ ಉಸ್ತುವಾರಿ ಸಂತೋಷ ಲಾಡ್‌ ಅವರು ಆಮ್‌ ಆದ್ಮಿ ಪಕ್ಷದೊಂದಿಗೆ ಎರಡ್ಮೂರು ಸಭೆಗಳನ್ನು ನಡೆಸಿರುವುದುಂಟು.

ಆಪ್‌ ಪಕ್ಷವು ಎಲ್ಲಿ ಸದೃಢವಾಗಿದೆಯೋ ಅಲ್ಲಿ ಕಾಂಗ್ರೆಸ್‌ ಪರ ಮತಯಾಚನೆ ಮಾಡುವಂತೆ ಕೋರಿದ್ದಾರೆ. ಜತೆಗೆ ಇನ್ಮೇಲೆ ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತೆ ಕೋರಿದ್ದಾರೆ. ಬೂತ್‌ ಮಟ್ಟದಲ್ಲಿ ಆಪ್‌ ಕಾರ್ಯಕರ್ತರು ಕೆಲಸದಲ್ಲಿ ತೊಡಗಿದ್ದು, ಕಾಂಗ್ರೆಸ್‌ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನು ಹದಿನೈದು ದಿನಗಳ ಕಾಲ ಬೂತ್‌ ಮಟ್ಟದಲ್ಲೇ ಕೆಲಸ ಮಾಡಿ ಆಮೇಲೆ ಬಹಿರಂಗ ಸಭೆಗಳಲ್ಲಿ ಭಾಗವಹಿಸಲು ಆಪ್‌ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿರುವುದಾಗಿ ಆಪ್‌ ತಿಳಿಸಿದೆ.

2014ರಲ್ಲಿ ಸ್ಪರ್ಧಿಸಿತ್ತು:

2018, 2023ರ ವಿಧಾನಸಭೆ ಹಾಗೂ 2021ರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್‌ ಪಕ್ಷವೂ ಅದೃಷ್ಟ ಪರೀಕ್ಷಿಸಿತ್ತು. ಆದರೆ ಮತದಾರ ಕೈ ಹಿಡಿಯಲಿಲ್ಲ. ಆದರೆ ಕೆಲ ಸಾವಿರಗಟ್ಟಲೇ ಮತ ಪಡೆಯುವಲ್ಲಿ ಆಪ್‌ ಯಶಸ್ವಿಯಾಗಿತ್ತು. ಇನ್ನು 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ತನ್ನ ಹುರಿಯಾಳನ್ನು ಕಣಕ್ಕಿಳಿಸಿತ್ತು. ಆಗ ಸರಿಸುಮಾರು 5 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಿರಲಿಲ್ಲ. ಇದೀಗ ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಿದೆ. ಕಾಂಗ್ರೆಸ್‌ಗೆ ಜತೆಯಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿದೆ. ಬಿಜೆಪಿಗೆ ಜೆಡಿಎಸ್‌, ಕಾಂಗ್ರೆಸ್‌ಗೆ ಆಪ್‌ ಜತೆಯಾದಂತಾಗಿದೆ.

ಇಂಡಿಯಾ ಒಕ್ಕೂಟದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ. ಸಂತೋಷ ಲಾಡ್‌ ಅವರು ನಮ್ಮ ಪಕ್ಷದ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಎರಡ್ಮೂರು ಸಭೆ ಮಾಡಿದ್ದಾರೆ. ನಾವು ಕೂಡ ಬೂತ್‌ ಮಟ್ಟದಲ್ಲಿ ಕೆಲಸ ಶುರು ಮಾಡಿದ್ದೇವೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಅನಂತಕುಮಾರ ಬುಗಡಿ ಹೇಳಿದರು.

Share this article