ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ, ಮಾಡುವ ಕಾಯಕದಲ್ಲಿ ಮೇಲೂ ಅಲ್ಲ. ಕೀಳೂ ಅಲ್ಲ. ತನು, ಮನ, ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕವೆಂದು ಶಿವಶರಣ ಶ್ರೀ ಹಡದಪ್ಪ ಅಪ್ಪಣ್ಣ 12 ನೇ ಶತಮಾನದಲ್ಲಿ ಇಡೀ ಸಮಾಜಕ್ಕೆ ತಿಳಿಸಿದರು.
ಅಪ್ಪಣ್ಣನವರಿಗೆ ಬಸವಣ್ಣನೇ ಗುರುವಾದನು, ಲಿಂಗವಾದನು, ಜಂಗಮವಾದನು, ಪ್ರಸಾದವಾದನು. ನಾನು ದೇಹವಾದರೆ, ಬಸವಣ್ಣನೇ ಪ್ರಾಣವಾದನು ಎಂದು ಬಸವಪ್ರಿಯರಾದರು. ಕ್ಷೌರಿಕರಾದ ಹಡಪದ ಅಪ್ಪಣ್ಣನವರ ಮುಖ ನೋಡಿದರೆ ಅಪಶಕುನ ಎಂದು ಕಲ್ಯಾಣದ ಮೇಲ್ಜಾತಿಗಳು ಬೊಬ್ಬಿಡುತ್ತಿದ್ದರು. ಹೀಗಿರುವಾಗ ಬಸವಣ್ಣನವರು ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಹಾಗೂ ತಮ್ಮ ಜೀವದ ಒಡನಾಡಿಯಾಗಿ ಮಾಡಿಕೊಂಡರು. ಆ ಮೂಲಕ ಮೇಲ್ಜಾತಿಯವರ ಮೌಢ್ಯತೆಯನ್ನು ಬಸವಣ್ಣ ಧಿಕ್ಕರಿಸಿ ತಮ್ಮನ್ನು ಭೇಟಿಯಾಗಲು ಬರುವ ಯಾರೇ ಆಗಲಿ, ಅವರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕೇಂಬ ನಿಯಮ ಮಾಡಿದರು. ಅದರಂತೆ ಎಲ್ಲರೂ ಅಪ್ಪಣ್ಣನವರನ್ನು ಭೇಟಿಯಾಗಿ ಬರುತ್ತಿದ್ದರು. ಜಾತೀಯತೆ ಮೂಢನಂಬಿಕೆ ರಹಿತ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಹಡಪದ ಅಪ್ಪಣ್ಣನವರು ಸದಾ ಬಸವಣ್ಣನವರ ಬಲಗೈ ಬಂಟರಾಗಿದ್ದರು ಎಂದರು.ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಹಡಪದ ಅಪ್ಪಣ್ಣರಂತಹ ಮಹಾನೀಯರ ಇತಿಹಾಸವನ್ನು ಯುವಜನತೆ ಸೇರಿದಂತೆ ನಾವೆಲ್ಲ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಮಹನೀಯರ ಜಯಂತಿ ಆಚರಣೆ ಮಾಡುತ್ತಿದೆ. ಈ ಮಹನೀಯರು ಶತಮಾನಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಕ್ಷೌರಿಕರ ಮುಖ ನೋಡಬಾರದೆಂಬ ಮೌಢ್ಯತೆಯಿಂದ ಸಮಾಜವನ್ನು ಹೊರತರಲು 12ನೇ ಶತಮಾನದ ಬಸವಣ್ಣ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನನ್ನು ನೇಮಿಸಿ, ಅವರನ್ನು ಮೊದಲು ಭೇಟಿಯಾಗಿ ನಂತರ ಬಸವಣ್ಣನವರನ್ನು ಭೇಟಿಯಾಗುವಂತೆ ಮಾಡಿದರು. ಬಸವಣ್ಣ ಮತ್ತು ಅಪ್ಪಣ್ಣ ತುಂಬಾ ಆತ್ಮೀಯರಾಗಿದ್ದರು. ಹಡಪದ ಅಪ್ಪಣ್ಣ ಓರ್ವ ಜ್ಞಾನಿ, ಕ್ರಾಂತಿಕಾರಿ, ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಕೆಲಸ ಮಾಡಿದ್ದಾರೆ. ಅವರ ತತ್ವ ಮತ್ತು ವಿಚಾರಗಳನ್ನು ನಾವು ಅನುಸರಿಸಿ ಅವರ ದಾರಿಯಲ್ಲಿ ಸಾಗಬೇಕಿದೆ ಎಂದರು.
ಕ್ಷೌರಿಕ ವೃತ್ತಿ ಒಂದು ಮಹಾವೃತ್ತಿಯಾಗಿದ್ದು, ನಮ್ಮನ್ನೆಲ್ಲ ಸ್ವಚ್ಚಗೊಳಿಸುವ ಕಾಯಕವಾಗಿದೆ. ಅಪ್ಪಣ್ಣನವರ ಪತ್ನಿ ನಿಂಗಮ್ಮ ಸಹ ನಿಜಶರಣೆಯಾಗಿದ್ದರು. ಯಾವುದೇ ಶರಣರನ್ನು ಜಾತಿಗಳಿಗೆ ಸೀಮಿತಗೊಳಿಸಬಾರದು. ನಾವೆಲ್ಲ ಅಪ್ಪಣ್ಣನವರ ವಚನಗಳನ್ನು ಓದಿ, ಅದರ ಆಶಯದಂತೆ ಮುಂದೆ ಸಾಗಬೇಕು. ರಾಜ್ಯ ಸರ್ಕಾರ ಹಿಂದುಳಿದ, ಬಡ ವರ್ಗದ ಏಳ್ಗೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದು, ವಿಶ್ವಸಂಸ್ಥೆ ಸಹ ಈ ಯೋಜನೆಗಳನ್ನು ಶ್ಲಾಘಿಸಿದೆ. ಎಲ್ಲರೂ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರು.
ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಂ.ಮಲ್ಲೇಶಪ್ಪ, ತಾಲೂಕು ಅಧ್ಯಕ್ಷ ಎಂ.ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎಚ್.ಉಮೇಶ್ ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.