ಸಾರಾಂಶ
ನವೆಂಬರ್ ಕ್ರಾಂತಿಯ ಚರ್ಚೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ನಾಯಕ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯವಾಗುವುದಿಲ್ಲ ಎಂಬ ಸಂದೇಶ ರವಾನೆಯ ಉದ್ದೇಶವನ್ನು ಇದು ಹೊಂದಿದೆ ಎನ್ನಲಾಗುತ್ತಿದೆ.
ಬೆಂಗಳೂರು : ನವೆಂಬರ್ ಕ್ರಾಂತಿಯ ಚರ್ಚೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ನಾಯಕ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯವಾಗುವುದಿಲ್ಲ ಎಂಬ ಸಂದೇಶ ರವಾನೆಯ ಉದ್ದೇಶವನ್ನು ಇದು ಹೊಂದಿದೆ ಎನ್ನಲಾಗುತ್ತಿದೆ.
‘ನಮ್ಮ ತಂದೆ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರಗತಿಪರ ಚಿಂತನೆ ಉಳ್ಳವರಿಗೆ ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡಲು, ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಈ ಜವಾಬ್ದಾರಿ ತೆಗೆದುಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿ ಅವರು ಸಮರ್ಥರು’ ಎಂದು ಯತೀಂದ್ರ ಬಹಿರಂಗ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಆಕಸ್ಮಿಕವಲ್ಲ. ತುಂಬಾ ಯೋಚಿಸಿ ಉರುಳಿಸಿದ ದಾಳ ಎನ್ನಲಾಗುತ್ತಿದೆ. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಪ್ರಯತ್ನದ ಬಗ್ಗೆ ವಾಲ್ಮೀಕಿ (ನಾಯಕ) ಸಮುದಾಯ ಹಾಗೂ ನಾಯಕರು ಅಸಮಾಧಾನಗೊಂಡಿದ್ದಾರೆ. ವಿ.ಎಸ್. ಉಗ್ರಪ್ಪ ಸೇರಿ ಹಲವು ನಾಯಕರು ನಮ್ಮ ತಟ್ಟೆ ಅನ್ನಕ್ಕೆ ಕೈ ಹಾಕಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿಯೇ ಹೇಳಿದ್ದರು.
ಹೀಗೆ ಅಸಮಾಧಾನಗೊಂಡಿರುವ ಸಮುದಾಯವನ್ನು ಸಮಾಧಾನಗೊಳಿಸಲು, ಕಾಂಗ್ರೆಸ್‌ನಿಂದ ಅನ್ಯಾಯವಾಗುವುದಿಲ್ಲ ಎಂದು ಸಾರಲು ವಾಲ್ಮೀಕಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿಯನ್ನು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಹೇಳಿಸಲಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಡಿಕೆಶಿಗೆ ತಿರುಗೇಟು?:
ನಾಯಕತ್ವ ಬದಲಾವಣೆ ಬಗ್ಗೆ ಖಚಿತವಿಲ್ಲದಿದ್ದರೂ ನಾಯಕತ್ವ ಬದಲಾವಣೆ ಆದರೆ ಡಿ.ಕೆ.ಶಿವಕುಮಾರ್ ಅವರಿಗೇ ಪಟ್ಟ ಎಂದು ಉಪಮುಖ್ಯಮಂತ್ರಿ ಅವರ ಬೆಂಬಲಿಗರು ವಿಶ್ವಾಸದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಹ ತೆರೆಮರೆಯಲ್ಲೇ ಪೂರಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜತೆಗೆ ಡಿ.ಕೆ.ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಪರಸ್ಪರ ವಿರೋಧಿ ಬಣ ಇದ್ದಂತೆ. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನೆಲೆಗೆ ತಂದು ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಲಾಗುತ್ತಿದೆ ಎಂದೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
;Resize=(690,390))
)
;Resize=(128,128))
;Resize=(128,128))