ಸಾರಾಂಶ
ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣೆ ವೇಳೆ ಮಾಜಿ ಸಂಸದ ರಮೇಶ ಕತ್ತಿ ವಾಲ್ಮೀಕಿ ಸಮುದಾಯದ ಕುರಿತು ಅವಾಚ್ಯ ಶಬ್ಧಗಳಿಂದ ನಿಂದಿಸಿ ವಾಲ್ಮೀಕಿ ಸಮುದಾಯದವರಿಗೆ ಸಾರ್ವಜನಿಕವಾಗಿ ಅವಮಾನಿಸಿದ್ದು ಖಂಡನೀಯ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡ ರಮೇಶ ಸಿಂದಗಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣೆ ವೇಳೆ ಮಾಜಿ ಸಂಸದ ರಮೇಶ ಕತ್ತಿ ವಾಲ್ಮೀಕಿ ಸಮುದಾಯದ ಕುರಿತು ಅವಾಚ್ಯ ಶಬ್ಧಗಳಿಂದ ನಿಂದಿಸಿ ವಾಲ್ಮೀಕಿ ಸಮುದಾಯದವರಿಗೆ ಸಾರ್ವಜನಿಕವಾಗಿ ಅವಮಾನಿಸಿದ್ದು ಖಂಡನೀಯ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡ ರಮೇಶ ಸಿಂದಗಿ ಆಗ್ರಹಿಸಿದರು.ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ನಡೆಸಲಾದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮುದಾಯದ ಜಾತಿ ನಿಂದನೆ ಮಾಡಿ ಅವರ ಶಾಂತಿ ಕದಡುವ ಕಾರ್ಯ ಮಾಡುತ್ತಿದ್ದು, ಹೀಗೆ ಸಮಾಜದಲ್ಲಿ ಸತತವಾಗಿ ಮೇಲು-ಕೀಳು ಎಂಬ ಭಾವನೆಗಳ ಮೂಲಕ ಸಮುದಾಯವನ್ನು ಅವಮಾನಿಸಿದ್ದಾರೆ. ಸಂವಿಧಾನ ಬದ್ಧವಾದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವಂತೆ ಮಾಡಿದ್ದು, ರಮೇಶ ಕತ್ತಿಯವರ ಮೇಲೆ ಯೋಗ್ಯ ಕಾನೂನಿನ ಕ್ರಮ ಕೈಗೊಂಡು, ವಾಲ್ಮೀಕಿ ಸಮುದಾಯದಕ್ಕೆ ನ್ಯಾಯ ಕೊಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಮುಖಂಡ ಅಶೋಕ ಯಲಡಗಿ ಮಾತನಾಡಿ, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಆಡಿರುವ ಜಾತಿ ನಿಂದನೆ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ 24 ಗಂಟೆಯೊಳಗಾಗಿ ಬಂಧಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾಕಾರರು ರಮೇಶ ಕತ್ತಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರೇಡ್-2 ತಹಸೀಲ್ದಾರ್ ಬಿ.ವೈ.ಹೊಸಕೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ದಲಿತ ಸಮುದಾಯದ ಮುಖಂಡರು ಇತರರು ಭಾಗವಹಿಸಿದ್ದರು.