ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ರೈಲು ನಿಗಮವು ತಾತ್ಕಾಲಿಕವಾಗಿ ಮೆಟ್ರೋ ದರವನ್ನು ತಡೆ ಹಿಡಿದಿದೆ ಎಂದು ತಿಳಿಸಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಪುನಃ ದರ ಪರಿಷ್ಕರಣಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು : ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ರೈಲು ನಿಗಮವು ತಾತ್ಕಾಲಿಕವಾಗಿ ಮೆಟ್ರೋ ದರವನ್ನು ತಡೆ ಹಿಡಿದಿದೆ ಎಂದು ತಿಳಿಸಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಪುನಃ ದರ ಪರಿಷ್ಕರಣಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾನುವಾರ ಮೆಟ್ರೋ ದರ ಏರಿಕೆಗೆ ತಡೆಬಿದ್ದ ಬಳಿಕ ಮಾತನಾಡಿದ ಅವರು, ದರ ಏರಿಕೆ ಸ್ಥಗಿತಗೊಂಡಿರುವುದು ತಾತ್ಕಾಲಿಕ ಮಾತ್ರ. ಮೆಟ್ರೋ ಶೇ. 100 ರಷ್ಟು ದರ ಏರಿಕೆ ಮಾಡಿದ್ದ ಕಳೆದ 8-10 ತಿಂಗಳಿಂದ ನಾವು ಇದನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೋರಾಡಿದ್ದೇವೆ. ಇದು ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದರು.
ಇದು ಶಾಶ್ವತವಾದ ಪರಿಹಾರವಲ್ಲ
ಆದರೆ, ಇದು ಶಾಶ್ವತವಾದ ಪರಿಹಾರವಲ್ಲ, ಬೆಂಗಳೂರು ಮೆಟ್ರೋ ದೇಶದಲ್ಲೆ ಅತೀ ದುಬಾರಿ ಮೆಟ್ರೋ ಆಗಲು ರಾಜ್ಯ ಸರ್ಕಾರ ಕಾರಣ. ರಾಜ್ಯ ಸರ್ಕಾರ ವಿವಿಧ ಸ್ಕೀಂ ಜಾರಿ ಮಾಡಿದ್ದರಿಂದ ಅದರ ಟ್ರಂಕ್ ಖಾಲಿಯಾಗಿದೆ. ಹೀಗಾಗಿ ಇಷ್ಟು ವರ್ಷ ನಡೆಸಿಕೊಂಡು ಬಂದಿದ್ದ ಅನುದಾನ ಬೆಂಬಲವನ್ನು (ಶ್ಯಾಡೋ ಸಪೋರ್ಟ್) ಹಿಂದಕ್ಕೆ ಪಡೆಯಿತು. ಈ ಹೊರೆಯನ್ನು ಬಿಎಂಆರ್‌ಸಿಎಲ್ ಮೂಲಕ ಗ್ರಾಹಕರ ಮೇಲೆ ಹೊರಿಸಲಾಗಿದೆ ಎಂದರು.
ದರ ಪರಿಷ್ಕರಣಾ ಸಮಿತಿ ಮೂಲಕ ಪ್ರತಿ ವರ್ಷ ಸ್ವಯಂಚಾಲಿತ ದರ ಏರಿಕೆ ಮಾಡಲು ಪ್ರಸ್ತಾಪ ರೂಪಿಸಿಕೊಂಡಿದೆ. ಇದನ್ನು ಸರಿಪಡಿಸಲು ರಾಜ್ಯ ಸರ್ಕಾರ ಹೊಸ ದರ ಪರಿಷ್ಕರಣ ಸಮಿತಿಯಯನ್ನು ರಚಿಸಬೇಕು. ಜತೆಗೆ ಹಿಂದಿನಂತೆ ಅನುದಾನ ಬೆಂಬಲವನ್ನು (ಶ್ಯಾಡೋ ಸಪೋರ್ಟ್) ಮುಂದುವರಿಸುವುದನ್ನು ಸೇರ್ಪಡೆ ಮಾಡಬೇಕು. ರಾಜ್ಯ ಸರ್ಕಾರ ಸುಳ್ಳು ಹೇಳುವುದನ್ನು ಬಿಟ್ಟು ಪರಿಷ್ಕರಣ ಸಮಿತಿಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಫೇರ್‌ಹೈಕ್ ಬೇಡ-ಟೀಶರ್ಟ್ ಧರಿಸಿದ್ದ ತೇಜಸ್ವಿ:
ದರ ನಿರ್ಧಾರ ಸಮಿತಿ ವರದಿಯ ಆಯ್ದ ಭಾಗ ಮುದ್ರಿಸಿದ್ದ ಫೇರ್‌ಹೈಕ್ ಬೇಡ ಟೀಶರ್ಟ್ ಧರಿಸಿದ್ದ ಸಂಸದ ತೇಜಸ್ವಿ ಸೂರ್ಯ ಭಾನುವಾರ ಬೆಳಗ್ಗೆ ಮೆಟ್ರೋ ನಿಲ್ದಾಣಗಳಿಗೆ ತೆರಳಿ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಹರಿಹಾಯ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮೆಟ್ರೋ ದರ ಏರಿಕೆ ಅನಿವಾರ್ಯವಾಗಿದೆ. ಎಫ್‌ಎಫ್‌ಸಿ ವರದಿಯ 3ನೇ ಅಧ್ಯಾಯದ 9ನೇ ಪುಟವು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬ ಸತ್ಯವನ್ನು ಎತ್ತಿ ತೋರಿಸುತ್ತದೆ. ಇಲ್ಲಿವರೆಗೆ, ಕರ್ನಾಟಕ ಸರ್ಕಾರವು ಬಜೆಟ್ ಹಂಚಿಕೆಯ ಮೂಲಕ ನಗದು ನಷ್ಟ ಮರುಪಾವತಿ, ಮತ್ತು ಭಾರತ ಸರ್ಕಾರ ಮತ್ತು ದೇಶೀಯ ಹಣಕಾಸು ಸಂಸ್ಥೆಗಳಿಗೆ ಸಾಲ ಮರುಪಾವತಿಗೆ ಶ್ಯಾಡೋ ಕ್ಯಾಶ್ ಸಪೋರ್ಟ್ (ಎಸ್‌ಸಿಎಸ್) ನೀಡುತ್ತಿತ್ತು. ರಾಜ್ಯ ಸರ್ಕಾರ ಎಸ್‌ಸಿಎಸ್ ಹಿಂಪಡೆದಿರುವುದು ನೇರವಾಗಿ ದರ ಏರಿಕೆ ಮತ್ತು ವಾರ್ಷಿಕ ಸ್ವಯಂಚಾಲಿತ ಹೆಚ್ಚಳಕ್ಕೆ ಕಾರಣವಾಗಿದೆ, ಇದು ಲಕ್ಷಾಂತರ ಬೆಂಗಳೂರಿಗರ ಮೇಲೆ ಹೊರೆಯಾಗಿದೆ ಎಂದರು.

