ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ತಾಲೂಕಿನಲ್ಲಿ ವಾಸಿಸುವ ದೇವಾಂಗ ಸಮಾಜದ ಜನರಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಇನ್ನುಳಿದ ಪ್ರಮಾಣ ಪತ್ರಗಳನ್ನು ಪೂರೈಸುವಲ್ಲಿ ತೊಂದರೆಯಾಗುತ್ತಿದ್ದು, ವಿನಾಕಾರಣ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ದೇವಾಂಗ ಸಮಾಜದ ಅಧ್ಯಕ್ಷ ಮಹಾದೇವ ವರೂಟೆ ನೇತೃತ್ವದಲ್ಲಿ ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಮಹಾದೇವ ವರುಟೆ ಮಾತನಾಡಿ, ಚಿಕ್ಕೋಡಿ ಪಟ್ಟಣದ ರಹವಾಸಿಗಳ್ಳಿ ಹಲವಾರು ಕುಟುಂಬಗಳು ದೇವಾಂಗ (ಕೋಲ್ಟಿ) ಸಮಾಜಕ್ಕೆ ಸೇರಿದವರಾಗಿರುತ್ತೇವೆ. ನಾವು ನಮ್ಮ ಸಮಾಜದ ವತಿಯಿಂದ ಹೊಸಪೇಟ ಗಲ್ಲಿಯಲ್ಲಿ, ಬನಶಂಕರಿ ದೇವಸ್ಥಾನ ದೇವಾಂಗ ಸಮಾಜ ಟ್ರಸ್ಟ್ ಕಮಿಟಿ ಎಂದು 2000 ರಲ್ಲಿ ಸಹಾಯಕ ಧರ್ಮದ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರಲ್ಲಿ ನೋಂದ ಆಗಿರುತ್ತದೆ ಎಂದು ತಿಳಿಸಿದರು.
ನಮ್ಮ ಸಮಾಜದವರು ಬೇರೆ ಬೇರೆ ಜಾತಿ ಹೆಸರಿನಲ್ಲಿ ಉದಾಹರಣೆಗೆ ನೀಲಗಾರ, ಅಂಗಾಯತ ನೀಲಗಾರ, ದೇವಾಂಗ, ಕೋ,ಹಟಗಾರ, ವಿನಕಾರ, ನೇಕಾರ, ಜಾಡರ, ಜಾಡರು ಹೀಗೆ ಹಲವಾರು ಪದಗಳಿಂದ ಕರೆಯಲ್ಪಡುತ್ತೇವೆ. ಆ ಬಗ್ಗೆ ಕರ್ನಾಟಕ ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2002 ರಲ್ಲಿ ಸರ್ಕಾರಿ ಆದೇಶಿಸಿದ್ದು, ಅದರ ಪ್ರಕಾರ ನಮ್ಮ ಸಮಾಜದ ಜನರನ್ನು ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ ಹಾಗೂ ಅವರು ಗುರುತಿಸಲ್ಪಡುತ್ತಾರೆ. ದೇವಾಂಗ ಸಮಾಜದವರು ಶಾಲೆ ದಾಖಲಾತಿಗಳಲ್ಲಿ ಹಾಗೂ ಇನ್ನಿತರ ದಾಖಲೆಗಳಲ್ಲಿ ತಮ್ಮ ಜಾತಿಯನ್ನು ಬೇರೆ ಬೇರೆ ಶಬ್ದಗಳಲ್ಲಿ ಸಮೂದಿಸಿರುತ್ತಾರೆ. ಆದರೆ, ಒಟ್ಟಾಗಿ ನಮ್ಮ ದೇವಾಂಗ ಸಮಾಜವು ಪರಿಶಿಷ್ಟ 2 ರಲ್ಲಿ ವಿವರಿಸಿದಂತೆ ನಮ್ಮ ಸಮಾಜದ ಜನರು ಆ ಬಗ್ಗೆ ತಮ್ಮ ಕಾರ್ಯಾಲಯದಿಂದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಮತ್ತು ಇನ್ನಿತರ ಪತ್ರಗಳನ್ನು ಪಡೆಯಲು ಅರ್ಹರಿರುತ್ತಾರೆ. ಆದರೆ, ತಮ್ಮ ಕಾರ್ಯಾಲಯದಿಂದ ನಮ್ಮ ಪೂರ್ವಜರ ಜಾತಿ ಪ್ರಮಾಣ ಪತ್ರ ಹಾಜರ ಮಾಡಿದ ನಂತರ ಅಷ್ಟೆ ಪರಿಗಣಿಸಲಾಗುವುದು ಮತ್ತು ಆ ಬಗ್ಗೆ ತಮ್ಮ ಕಾರ್ಯಾಲಯದಿಂದ ದೊರೆಯಬೇಕಾದ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಇನ್ನಿತರ ಪ್ರಮಾಣ ಪತ್ರಗಳು ಸರಿಯಾಗಿ ಮತ್ತು ಸಮಯಕ್ಕನುಗುಣವಾಗಿ ದೊರೆಯದೇ ಇರುವುದರಿಂದ ನಮ್ಮ ಸಮಾಜಕ್ಕೆ ಮತ್ತು ನಮ್ಮ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮತ್ತು ನಮ್ಮ ಸಮಾಜ ಸಮಸ್ತ ಜನರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.ಮನವಿಯನ್ನು ಸ್ವೀಕರಿಸಿ ನಮ್ಮ ಸಮಾಜದ ಜನರಿಗೆ ಆಗುತ್ತಿರುವಂತಹ ಅನ್ಯಾಯವನ್ನು ನಿವಾರಣೆ ಮಾಡಬೇಕೆಂದು ಆಗ್ರಹಿಸಿದರು.
ಮಹಾದೇವ ವರುಟೆ, ರವೀಂದ್ರ ಅಕ್ಕತಂಗೇರಹಾಳ, ಕಲ್ಲಪ್ಪ ಅಂಬಲೆ, ರಾಜೇಂದ್ರ ಗುಲಗುಂಜಿ, ಶಂಕರ ಕೆರೂರೆ, ಕುಮಾರ ಪಾಟೀಲ, ದಯಾನಂದ ಮುಸಂಡಿ, ಅರುಣ ಯರಂಡೋಳೆ, ಉತ್ತಮ ನೇಜೆ, ಶ್ರೀನಿವಾಸ ಕಾಗಲೆ ಸೇರಿದಂತೆ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.