ಕನ್ನಡಪ್ರಭ ವಾರ್ತೆ ಸಿರುಗುಪ್ಪ
1995-2000 ವರೆಗಿನ ಅನುದಾನಿತ ಶಾಲೆಗಳನ್ನು ಸರ್ಕಾರವು ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದು, ಮುಂಬರುವ ದಿನಗಳಲ್ಲಿ ಶಾಲೆ ನಡೆಸುವುದು ಕಷ್ಟವಾಗುತ್ತಿದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ವೇತಾನನುದಾನವನ್ನು ನೀಡಲಾಗುತ್ತಿತ್ತು. 1986ಕ್ಕೆ ಸ್ಥಗಿತಗೊಂಡಿತು. 1999ರಲ್ಲಿ ಕಾಂಗ್ರೆಸ್ ಸರ್ಕಾರವು 1987ರಿಂದ 1992ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಸಂಸ್ಥೆಗಳಿಗೆ ವೇತಾನನುದಾನವನ್ನು ನೀಡಿತು. 2006ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರಗಳು 1987 ರಿಂದ 1995ರವರೆಗೆ ಎಲ್ಲಾ ವರ್ಗದ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಿತು. 1995ರ ನಂತರ ನಿರಂತರವಾಗಿ ಹೋರಾಟ ಮಾಡಿದರೂ ಅನುದಾನಕ್ಕೆ ಒಳಪಡಿಸುತ್ತಿಲ್ಲ ಎಂದು ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಂ.ಮೌಲಾಲಿ ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಭಾಗ್ಯಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ 2012 ರ ತನಕ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಿ, ರಾಜ್ಯಾದಾದ್ಯಂತ 29 ವರ್ಷಗಳ ಬೇಡಿಕೆಯಾದ 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ವೇತನಾನುದಾನ ನೀಡಬೇಕು. ಈ ಮೂಲಕ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಸಾವಿರಾರು ಶಿಕ್ಷಕರ ಬದುಕಿಗೆ ಹಾಗೂ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳಿಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಂ.ಪಂಪಾಪತಿ, ಸದಸ್ಯರಾದ ಹನುಮಂತ ರೆಡ್ಡಿ, ಶಬ್ಬಿರ್, ಮಾರುತಿ ಮತ್ತಿತರರಿದ್ದರು.