ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ

KannadaprabhaNewsNetwork | Published : Oct 5, 2024 1:44 AM

ಸಾರಾಂಶ

ಹಲವು ಬಾರಿ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡು ಜಂತರ-ಮಂತರನಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ರೈಲ್ವೆ ಸಚಿವರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ.

ಮುಂಡರಗಿ: ಗದಗ, ಮುಂಡರಗಿ, ಹೂವಿನ ಹಡಗಲಿ-ಹರಪನಹಳ್ಳಿ ಮಾರ್ಗವಾಗಿ ರೈಲ್ವೆ ಮಾರ್ಗ ಮಂಜೂರಾತಿಗೆ ಒತ್ತಾಯಿಸಿ ತಾಲೂಕು ಸಾವ೯ಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಗುರುವಾರ ಅಬ್ಬಿಗೇರಿ ಗ್ರಾಮಕ್ಕೆ ಆಗಮಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, 2009 ರಿಂದ 2024ರವರೆಗೂ ರೈಲ್ವೆ ಮಾರ್ಗಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಪ್ರದಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಾಣಾಸಿ ಹಾಗೂ ಕಾಶಿಯಲ್ಲಿ ಸತತ 11 ವರ್ಷಗಳ ಕಾಲ ರುದ್ರಾಭಿಷೇಕ ಮಾಡಿಸುವ ಮೂಲಕ ಆ ಭಾಗದಲ್ಲಿ ಪ್ರತಿಭಟನೆ ಮಾಡಿ ಅಲ್ಲಿ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಹಲವು ಬಾರಿ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡು ಜಂತರ-ಮಂತರನಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ರೈಲ್ವೆ ಸಚಿವರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. 10 ಬಾರಿ ಬೆಂಗಳೂರು ಚಲೋ ಪ್ರತಿಭಟನೆ ನಡೆಸಿ ಅಲ್ಲಿನ ಪ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮತ್ತು ಮೂಲಸೌಕಯ೯ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಅನೇಕ ಬಾರಿ ಅಂಚೆಪತ್ರ ಚಳವಳಿ, ಪಾದಯಾತ್ರೆ, ಮುಂಡರಗಿ ಬಂದ್, ರೈಲ್ವೆ ರೋಖೊ ಸೇರಿದಂತೆ ಅನೇಕ ಹೋರಾಟ ನಡೆಸಿದ್ದೇವೆ ಎಂದರು.

2014ರ ರೈಲ್ವೆ ಮುಂಗಡ ಪತ್ರದಲ್ಲಿ ರೈಲ್ವೆ ಮಾರ್ಗ ಮಂಜೂರಾಗಿದ್ದು, 2015ರಲ್ಲಿ ಗದಗನಿಂದ ಹರಪನಹಳ್ಳಿವರೆಗೂ 94ಕಿ ಮೀ ಸರ್ವೇ ಮಾಡಿಸಿ ಈ ಬೃಹತ್ ರೈಲ್ವೆ ಮಾರ್ಗಕ್ಕೆ ತಗಲುವ ಖರ್ಚು ₹ 813.14 ಕೋಟಿ ಆಗುತ್ತದೆ ಎಂದು ವರದಿ ಪಡೆದು ದೆಹಲಿ ರೈಲ್ವೆ ಬೋರ್ಡಿನವರು ಈ ರೈಲ್ವೆ ಯೋಜನೆ ಕಾಯ್ದಿರಿಸಿದ್ದಾರೆ. ಕಾಯ್ದಿರಿಸಿದ ಯೋಜನೆ ಪುನರ್ ಪ್ರಾರಂಭಿಸಲು ಮಾಜಿ ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ‌ ಸಲ್ಲಿಸಲಾಗಿದೆ ಆದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತ್ವರಿತಗತಿಯಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ನ. 19 ರಂದು ಮಂಗಳವಾರ ಬೆಳಗ್ಗೆ 11ಕ್ಕೆ ತುಮಕೂರಿನಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವಕುಮಾರ ಅಳವಂಡಿ, ಶಿವಕುಮಾರ ಹಿರೇಮಠ, ಬಸಪ್ಪ ವಡ್ಡರ ಇದ್ದರು.

Share this article