ಮಾರಿಕಾಂಬಾ ಹಿತರಕ್ಷಣಾ ಸಮಿತಿಯಿಂದ ಮನವಿ
ಕನ್ನಡಪ್ರಭ ವಾರ್ತೆ ಸಾಗರ
ಇಲ್ಲಿನ ಮಾರಿಕಾಂಬಾ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಮಹಾಸಭೆ ಕರೆಯದೆ ಲೆಕ್ಕಾಚಾರ ನೀಡಿಲ್ಲ. ಸಾರ್ವಜನಿಕರಿಗೆ ಸುಳ್ಳು ಹೇಳಿ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಕ್ರಮವನ್ನು ಖಂಡಿಸಿ ತಕ್ಷಣ ಸಮಿತಿ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಲು ಒತ್ತಾಯಿಸಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿ ಸಮಿತಿಯ ಸಂಚಾಲಕ ಎಂ.ಡಿ.ಆನಂದ್, ಕಳೆದ ೨೦ ವರ್ಷಗಳಿಂದ ಹಾಲಿ ವ್ಯವಸ್ಥಾಪಕ ಸಮಿತಿ ಅಧಿಕಾರಕ್ಕೆ ಅಂಟಿ ಕುಳಿತುಕೊಂಡಿದೆ. ಸಮಿತಿ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಆದರೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳು ಅಧಿಕಾರದಲ್ಲಿ ಮುಂದುವರೆಯುತ್ತಿದ್ದು ಮತ್ತೊಂದು ಜಾತ್ರೆ ನಡೆಸಲು ಹುನ್ನಾರ ನಡೆಸಿದೆ. ಇದಕ್ಕೆ ಹಿತರಕ್ಷಣಾ ಸಮಿತಿ ಅವಶಕಾಶ ನೀಡುವುದಿಲ್ಲ ಎಂದರು.ಸಮಿತಿಯಲ್ಲಿ ಈತನಕ ನಡೆದಿರುವ ಕಾಮಗಾರಿಗಳು ಸೇರಿದಂತೆ ಬೇರೆಬೇರೆ ವಹಿವಾಟುಗಳ ಸಮಗ್ರ ಲೆಕ್ಕಪತ್ರ ತನಿಖೆ ನಡೆಸಬೇಕು. ಟ್ರಸ್ಟ್ ರಚನೆ ನಂತರ ಅಧಿಕಾರ ಬಿಡುವುದಾಗಿ ಹೇಳುತ್ತಿರುವ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ. ತಕ್ಷಣ ಸರ್ವಸದಸ್ಯರ ಸಭೆ ಕರೆದು ಹೊಸ ಸಮಿತಿ ಅಸ್ತಿತ್ವಕ್ಕೆ ತರಬೇಕು. ಮುಂದಿನ ಒಂದು ವಾರದೊಗಳಗೆ ಸರ್ವಸದಸ್ಯರ ಸಭೆ ಕರೆಯದೆ ಹೋದಲ್ಲಿ ಹಿತರಕ್ಷಣಾ ಸಮಿತಿಯಿಂದ ದೇವಸ್ಥಾನ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಜಾತ್ರೆಗೆ ಇನ್ನು ಹತ್ತು ತಿಂಗಳು ಬಾಕಿ ಇದ್ದು, ಎಲ್ಲರೂ ಒಗ್ಗೂಡಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಹೋಗಬೇಕು. ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಆದಾಯ ಸದ್ವಿನಿಯೋಗವಾಗಬೇಕು. ಕಲ್ಯಾಣಮಂಟಪ, ಶಾಲೆ ನಿರ್ಮಾಣ ಮಾಡಲು ಸಮಿತಿಗೆ ಸೂಚನೆ ನೀಡಲಾಗಿದೆ. ಉಪವಿಭಾಗಾಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ರಾಮಪ್ಪ, ನಿತ್ಯಾನಂದ ಶೆಟ್ಟಿ, ಸದಾನಂದ, ಆನಂದ ಬಾಳೆಕೊಪ್ಪ, ದೇವರಾಜ್, ವಿ.ಶಂಕರ್, ಜನಾರ್ದನ ಆಚಾರಿ, ಟೀಪುಡಿ ಮಂಜುನಾಥ್, ದಿನೇಶ್ ಇನ್ನಿತರರು ಹಾಜರಿದ್ದರು.