ಎನ್‌ಡಿಆರ್‌ಎಫ್‌ ಮಾನದಂಡಕ್ಕಿಂತ ಹೆಚ್ಚುವರಿ ಪರಿಹಾರ ಪ್ಯಾಕೇಜ್ ಗೆ ಮನವಿ

KannadaprabhaNewsNetwork | Published : Aug 4, 2024 1:20 AM

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಭಾರೀ ಮಳೆ, ಗಾಳಿಯಿಂದ ಆಗಿರುವ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾನದಂಡಕ್ಕಿಂತ ಹೆಚ್ಚುವರಿಯಾಗಿ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

- ಎನ್‌ಡಿಆರ್‌ಎಫ್ ಮಾನದಂಡದನ್ವಯ ನೆರವು ನಿಗದಿ ಸಾಲದು । ಕೆ.ಜೆ.ಜಾರ್ಜ್ ರಿಂದ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಕೋರಿಕೆ

--- ಬಾಕ್ಸ್‌--

- ಸಂಪೂರ್ಣ ಹಾನಿಗೊಳಗಾದ ಮನೆಗೆ ತಾತ್ಕಾಲಿಕ 1.20 ಲಕ್ಷ ರು. ಪರಿಹಾರ

-ರಾಜೀವ್ ಗಾಂಧಿ ವಸತಿ ಯೋಜನೆಯಡಿ 3.80 ಲಕ್ಷ ರು.

- ಕುಸಿದಿರುವ ರಸ್ತೆಗಳ ತಾತ್ಕಾಲಿಕ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುವುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯಲ್ಲಿ ಭಾರೀ ಮಳೆ, ಗಾಳಿಯಿಂದ ಆಗಿರುವ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾನದಂಡಕ್ಕಿಂತ ಹೆಚ್ಚುವರಿಯಾಗಿ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿಯಾಗಿ ಪರಿಹಾರ ಕುರಿತು ಸಮಾಲೋಚನೆ ನಡೆಸಿದ ಸಚಿವ ಜಾರ್ಜ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಮಾನದಂಡದ ಅನ್ವಯ ನೆರವು ನಿಗದಿ ಮಾಡಿದರೆ ಜಿಲ್ಲೆಯಲ್ಲಿ ಪರಿಹಾರ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಿಲ್ಲೆಗೆ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಕೋರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಇತ್ತೀಚೆಗೆ ಭೇಟಿ ನೀಡಿ, ಆಗಿರುವ ತೊಂದರೆಗಳ ಬಗ್ಗೆ ಪರಿಶೀಲಿಸಿದ್ದೇನೆ. ಸಾಕಷ್ಟು ಮನೆಗಳು ಕುಸಿದಿದ್ದು, ರಸ್ತೆಗಳು ಕೂಡ ಹಾನಿಗೊಳಗಾಗಿವೆ. ಇದರಿಂದ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡು ತಾತ್ಕಾಲಿಕವಾಗಿ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ.

ಅನೇಕ ಕಡೆ ಭೂ ಕುಸಿತವುಂಟಾಗಿದೆ. ಮರಗಳು ಬಿದ್ದು ವಿದ್ಯುತ್ ಕಂಬ, ತಂತಿ, ಪರಿವರ್ತಕಗಳು ಹಾಳಾಗಿವೆ. ಇವೆಲ್ಲವನ್ನು ಸರಿಪಡಿಸಲು ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂಬುದನ್ನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದಾರೆ.

ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ತಾತ್ಕಾಲಿಕ 1.20 ಲಕ್ಷ ರು. ಪರಿಹಾರ ಈಗಾಗಲೇ ನೀಡಲಾಗಿದೆ. ಉಳಿದಂತೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ 3.80 ಲಕ್ಷ ರು. ನೀಡಿ ಮನೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ಹಾನಿಗೊಳಗಾಗಿರುವ ಮತ್ತು ಕುಸಿದಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಶಾಶ್ವತ ಪರಿಹಾರಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ಭೂ ಕುಸಿತಕ್ಕೂ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಎನ್‌ಡಿಆರ್‌ಎಫ್ ಅನ್ವಯ ಅನುದಾನ ನೀಡಿದರೆ ಈ ಎಲ್ಲಾ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ, ಎಂದು ಸಚಿವರು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ.

-- ಕೋಟ್‌--

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಭಾರೀ ಹಾನಿಯಾಗಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನುದಾನ ಹೊರತುಪಡಿಸಿ ಹೆಚ್ಚುವರಿ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಮನವಿ ಮಾಡಿ ವಾಸ್ತವ ಸ್ಥಿತಿಯನ್ನು ವಿವರಿಸಲಾಗಿದೆ. ಇದಕ್ಕೆ ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

- ಕೆ.ಜೆ.ಜಾರ್ಜ್

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು----

ಪೋಟೋ ಫೈಲ್‌ ನೇಮ್‌ 3 ಕೆಸಿಕೆಎಂ 1

Share this article