ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಮನವಿ

KannadaprabhaNewsNetwork | Published : Mar 19, 2025 12:32 AM

ಸಾರಾಂಶ

ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡದೇ ನಿರ್ಲಕ್ಷ್ಯ ತೋರಿದ ಪರಿಣಾಮ ಮಂಗಳವಾರ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಎಸಿ ಪ್ರಭಾವತಿ ಫಕ್ಕಿರಪೂರ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡದೇ ನಿರ್ಲಕ್ಷ್ಯ ತೋರಿದ ಪರಿಣಾಮ ಮಂಗಳವಾರ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಎಸಿ ಪ್ರಭಾವತಿ ಫಕ್ಕಿರಪೂರ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಬ್ರಿಟೀಷ್‌ ಸೈನ್ಯದ ವಿರುದ್ಧ ನಾಡಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದವರು ವೀರಮಾತೆ ಕಿತ್ತೂರು ರಾಣಿ ಚನ್ನಮ್ಮಾಜಿ ಹಾಗೂ ಸಂಸ್ಥಾನದ ಸೈನಿಕರು. ಅವರ ಅಪ್ರತಿಮ ಹೋರಾಟವು ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದೆ ದಾಖಲಾಗಿದೆ ಎಂದರು.ವೀರಮಾತೆ ಚನ್ನಮ್ಮ ಮತ್ತು ಸಂಸ್ಥಾನದ ವೀರ ಸೈನಿಕರ ಸ್ಮರಣೆ, ಕೋಟೆಯ ಸಂರಕ್ಷಣೆ ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ಚನ್ನಮ್ಮನ ಕಿತ್ತೂರು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ಸರ್ಕಾರಗಳ ಹೊಣೆ. ಹೋರಾಟಗಾರ್ತಿ ರಾಣಿ ಚನ್ನಮ್ಮಾಜಿಗೆ ಸ್ವಾತಂತ್ರದ ನಂತರ ಸರ್ಕಾರಗಳು ಸಲ್ಲಿಸುವ ಪರಮೋಚ್ಚ ಗೌರವವು ಅವರ ಕರ್ಮಭೂಮಿ ಅಭಿವೃದ್ಧಿಪಡಿಸುವುದೊಂದೇ ಆಗಿದೆ. ಅದರ ಜೊತೆಗೆ ಐತಿಹಾಸಿಕ ತಾಣಕ್ಕೆ ಭೇಟಿ ಕೊಡುವ ದೇಶದ ಯುವ ಮನಸುಗಳಿಗೆ ರಾಷ್ಟ್ರಪ್ರೇಮ, ದೇಶಭಕ್ತಿಯ ಸ್ಫೂರ್ತಿಯ ತಾಣವಾಗಿ ಈ ಮಹನೀಯರ ಕರ್ಮಭೂಮಿ ಕಂಗೊಳಿಸಬೇಕಿದೆ ಎಂದು ವಿವರಿಸಿದರು.ಸ್ವಾತಂತ್ರ್ಯ ಮತ್ತು ನಾಡಿನ ಸ್ವಾಭಿಮಾನಕ್ಕಾಗಿ ಮೊಟ್ಟ ಮೊದಲು ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ರಾಣಿ ಚನ್ನಮ್ಮಾಜಿಯ ಸಮಾಧಿಯನ್ನು ಭಾರತ ಸರ್ಕಾರವು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು. ರಾಣಿ ಚನ್ನಮ್ಮ ಮತ್ತು ವೀರರ ಶೌರ್ಯ, ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಿಸುವ ಕೆಲಸ ಈ ಮೂಲಕ ಇನ್ನೂ ಹೆಚ್ಚಿನ ರೀತಿ ನಡೆಯಬೇಕು. ರಾಷ್ಟ್ರದ ಹೆಮ್ಮೆ ಹಾಗೂ ಗೌರವದ ಪ್ರತೀಕವಾಗಿರುವ ರಾಣಿ ಚನ್ನಮ್ಮಾಜಿಯ ಪಟ್ಟಣವನ್ನು ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಲು ಬೇಕಾಗಿರುವ ಅಗತ್ಯ ಕ್ರಮಗಳು ಭಾರತ ಸರ್ಕಾರ ಅಡೆತಡೆಗಳಿಲ್ಲದೆ ಸಂಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಅಲ್ಲದೆ ರಾಜ್ಯ ಸರ್ಕಾರವು ತಾಯಿ ಚನ್ನಮ್ಮಾಜಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನು ಮಂಜೂರು ಮಾಡಬೇಕು. ಅಲ್ಲದೆ ಚನ್ನಮ್ಮಾಜಿಯ ಸ್ಥಳಗಳನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಒತ್ತಾಯಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ದೇವರ ಶೀಗಿಹಳ್ಳಿ, ಶ್ರೀಗುರು ಮಡಿವಾಳೇಶ್ವರ ಮಠದ ವಿರೇಶ್ವರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಹಜರತ್ ತನ್ವೀರಸಾಬ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಪಪಂ ಮಾಜಿ ಅಧ್ಯಕ್ಷ ಹನುಮಂತ ಲಂಗೋಟಿ, ಮುಖಂಡರಾದ ಜಗದೀಶ ವಸ್ತ್ರದ, ನ್ಯಾಯವಾದಿ ಶಿವಾನಂದ ಬೋಗೂರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮುದುಕಪ್ಪ ಮರಡಿ, ಬಸವರಾಜ ಸಂಗೊಳ್ಳಿ, ಮಲ್ಲಣ್ಣ ಸಾಣಿಕೊಪ್ಪ, ಕುಮಾರ ಬಿಕ್ಕಣ್ಣವರ ಸೇರಿದಂತೆ ಹಲವಾರು ಮುಖಂಡರು ಹಾಗೂ ಪಪಂ ಸದಸ್ಯರು ಹಾಜರಿದ್ದರು.ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ

ಕಿತ್ತೂರಿಗೆ ಸರ್ಕಾರಗಳಿಂದ ವಿಶೇಷ ಅನುದಾನ ಮಂಜೂರು ಹಾಗೂ ಸ್ಥಾನಮಾನ ನೀಡುವಂತೆ ಸರ್ಕಾರಗಳ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸೋಮವಾರ ಪೇಟೆಯ ಚನ್ನಮ್ಮಾಜಿಯ ವೃತ್ತದಿಂದ ಆರಂಭವಾದ ಮೆರವಣಿಗೆಯೂ ಅರಳಿಕಟ್ಟೆಯವರೆಗೂ ಸಂಚರಿಸಿತು. ನಂತರ ಮೆರವಣಿಗೆಕಾರರು ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವೃತ್ತಕ್ಕೆ ತೆರಳಿ ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಎಸಿ ಪ್ರಭಾವತಿ ಫಕ್ಕಿರಪೂರ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Share this article