ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರಿಂದ ಮನವಿ

KannadaprabhaNewsNetwork |  
Published : Jan 22, 2025, 12:32 AM IST
ಫೋಟೊ ಶೀರ್ಷಿಕೆ: 21ಹೆಚ್‌ವಿಆರ್6ಹಾವೇರಿ: ನಗರದ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘಟನೆ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ರಾಜ್ಯದ ವಿವಿಧ ಇಲಾಖೆಗಳಡಿ ಇರುವ ಹಾಸ್ಟೆಲ್ ಹಾಗೂ ವಸತಿ ಶಾಲೆ-ಕಾಲೇಜುಗಳಲ್ಲಿ ದುಡಿಯುವ ಹೊರಗುತ್ತಿಗೆ ನೌಕರರಿಗೆ ಮಾಸಿಕ 31 ಸಾವಿರ ಕನಿಷ್ಠ ವೇತನ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘಟನೆಯ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.

ಹಾವೇರಿ: ರಾಜ್ಯದ ವಿವಿಧ ಇಲಾಖೆಗಳಡಿ ಇರುವ ಹಾಸ್ಟೆಲ್ ಹಾಗೂ ವಸತಿ ಶಾಲೆ-ಕಾಲೇಜುಗಳಲ್ಲಿ ದುಡಿಯುವ ಹೊರಗುತ್ತಿಗೆ ನೌಕರರಿಗೆ ಮಾಸಿಕ 31 ಸಾವಿರ ಕನಿಷ್ಠ ವೇತನ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘಟನೆಯ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಕಳೆದ 15-20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್ ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್‌ಗಳು, ಹೊರಗುತ್ತಿಗೆ ಶಿಕ್ಷಕರು, ದಿನಗೂಲಿ ನೌಕರರು ಯಾವುದೇ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ಸಾಕಷ್ಟು ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಸ್ಟೆಲ್ ನೌಕರರಿಗೆ ಹೊರಗುತ್ತಿಗೆ ಬದಲಾಗಿ ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು, ನಿವೃತ್ತಿವರೆಗೆ ಸೇವಾಭದ್ರತೆ ಕೊಡಬೇಕು. ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ಕೊಡಬೇಕು. ಕೆಲಸದ ಸಮಯ ನಿಗಧಿ ಆಗಬೇಕು ಎಂದು ಒತ್ತಾಯಿಸಿದರು. ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐ.ಡಿ ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ಇಎಸ್‌ಐ ಮತ್ತು ಪಿಎಫ್ ಹಣ ತುಂಬಿದ ರಶೀದಿ ಕೊಡಬೇಕು. ವಿವಿಧ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದಾಗಬೇಕು. ಪ್ರತಿ ತಿಂಗಳು 5ನೇ ತಾರೀಖು ಸಂಬಳ ನೀಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು. ವಸತಿ ನಿಲಯ ಮತ್ತು ಹಾಸ್ಟೆಲ್‌ಗಳಿಗೆ ಅಡುಗೆಗೆ ಗುಣಮಟ್ಟದ, ಸರಿಯಾದ ಪ್ರಮಾಣ ಕೊಡಿ, ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಮುಖಂಡರಾದ ಶಾಂತಾ ಗಡ್ಡಿಯವರ, ಎಚ್.ಎಚ್. ನದಾಫ್, ಶಿವರಾಜಕುಮಾರ ಹಿತ್ಲರ, ಶೋಭಕ್ಕ ಡೊಳ್ಳೇಶ್ವರ, ಮಂಜುನಾಥ ಇಂಗಳಗಿ, ಪುಟ್ಟಮ್ಮ ಧೂಳಿಕೊಪ್ಪ, ವಿನೋದಾ ಕಾಗೇರ, ಯಲ್ಲಪ್ಪ ಹರಿಜನ, ಸುಜಾತಾ ಆರೇಗೊಪ್ಪ ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ