ಗದಗ: ರಾಜ್ಯ ಸರ್ಕಾರವು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ. 4 ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ಜಿಲ್ಲಾ ವಿಶ್ವ ಹಿಂದು ಪರಿಷತ್ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಂವಿಧಾನ ರಚನೆಯಾಗುವಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಧರ್ಮಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ಅವರೇ ರಚಿಸಿದ ಸಂವಿಧಾನದ ಆರ್ಟಿಕಲ್ 15ರಲ್ಲಿ ರಾಜ್ಯ ಸರ್ಕಾರವು ನಿರ್ದಿಷ್ಟವಾಗಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರಿಕರಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಬದಲಿಸಲು ಇದೇ ರೀತಿ ಪ್ರಯತ್ನಗಳು ನಡೆದಾಗ ನ್ಯಾಯಾಲಯಗಳು ತಿರಸ್ಕರಿಸಿವೆ. ಸುಪ್ರೀಂ ಕೋರ್ಟ್ ಕೂಡ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ರದ್ದುಗೊಳಿಸಿದೆ. 77 ಸಮುದಾಯಗಳನ್ನು ಒಬಿಸಿ ಎಂದು ವರ್ಗೀಕರಿಸುವ ಪಶ್ಚಿಮ ಬಂಗಾಲದ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೀಗಿದ್ದರೂ ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿ ನೀಡುವ ಮೂಲಕ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಆಡಳಿತಾರೂಢ ಸರ್ಕಾರದ ವೋಟ್ ಬ್ಯಾಂಕ್ ಆಗಿರುವ ಸಮುದಾಯವನ್ನು ಸಮಾಧಾನಪಡಿಸಲು ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಒದಗಿಸುವ ಕಾರ್ಯವು ರಾಷ್ಟ್ರೀಯ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ. ಈ ಮಸೂದೆಯನ್ನು ತಡೆಹಿಡಿಯಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಉಪಾಧ್ಯಕ್ಷೆ ರಾಣಿ ಆರ್. ಚಂದಾವರಿ, ಈರಣ್ಣ ಹೇಮಾದ್ರಿ, ಕಾರ್ಯದರ್ಶಿ ಸಂಜೀವ್ ಜೋಶಿ, ಕೋಶಾಧ್ಯಕ್ಷ ಮಾರುತಿ ಪವಾರ, ವೀರೇಶ್ ಮಡಿವಾಳರ, ಶ್ರೀನಿವಾಸ ಹುಬ್ಬಳ್ಳಿ, ಕಾರ್ತಿಕ್ ಪರ್ವತಗೌಡ, ಮಂಜುನಾಥ ಬಂಗಾರಿ, ವಿಜಯ ರೈಕರ್, ಸಂತೋಷ್ ಅಂಗಡಿ, ಪ್ರಸಾದ ಬಡಿಗೇರ, ಅಶೋಕ ಜಕ್ಕಲಿ, ಸಂಜೀವ್ ರೆಡ್ಡಿ, ಕಪಿಲ್ ಜಿ., ಶ್ರೀಕಾಂತ ಕಂಬಳಿ, ವಿಜಯಕುಮಾರ ನಂದಿಕೋಲ್ಮಠ, ಪ್ರಥಾ ಪವಾರ ಹಾಗೂ ಇತರರು ಇದ್ದರು.