ಫಸಲ್ ಭೀಮಾ ವಿಮೆ ಹಣ ದುರ್ಬಳಿಕೆ 36 ಜನರನ್ನು ಬಂಧಿಸಲು ಮನವಿ

KannadaprabhaNewsNetwork | Published : May 21, 2024 12:40 AM

ಸಾರಾಂಶ

ದೇವದುರ್ಗದಲ್ಲಿ ಫಸಲ್ ಬಿಮಾ ಯೋಜನೆಯಡಿ ವಿಮೆ ಹಣ ದುರ್ಬಳಿಕೆ 36 ಜನರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಸಮಿತಿ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ಫಸಲ್ ಬಿಮಾ ಯೋಜನೆಯಡಿ ವಿಮೆ ಹಣ ದುರ್ಬಳಿಕೆ ಹಿನ್ನೆಲೆ 36 ಜನರ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಸೋಮವಾರ ಕರ್ನಾಕಟ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್‌ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ವಿಮೆ ಹಣ ದುರ್ಬಳಿಕೆ ಜಿಲ್ಲಾಡಳಿತ ಸಮಸ್ಯೆ ಗಂಭೀರವಾಗಿ ಪರಿಣಿಸಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ರೈತರಿಗೆ ಮೋಸ ಮಾಡಿದ 36 ಜನರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಂತಹ ತಪ್ಪುಗಳು ಪದೇ-ಪದೇ ಆಗದಂತೆ ತಾಲೂಕ ಆಡಳಿತ ಮುನ್ನೆಚ್ಚರಿಕೆ ವಹಿಸಬೇಕು ಎಂದು ದೂರಿದರು.

ರಾಜ್ಯದಲ್ಲಿ ಅನೇಕ ಅರ್ಹ ಫಲಾನುಭವಿ ರೈತರು ಬೆಳೆ ವಿಮೆ ಕಟ್ಟಿದ್ದರೂ ನಯಾ ಪೈಸೆ ಬಂದಿಲ್ಲ. ಈಗೀರುವಾಗಲೇ ರೈತರನ್ನು ವಂಚಿಸಿ ಲಕ್ಷಾಂತರ ರು. ದುರ್ಬಳಿಕೆ ಮಾಡಿಕೊಂಡಿರುವ 36 ಜನರನ್ನು ತಕ್ಷಣವೇ ಬಂಧಿಸಬೇಕು. ಇದರಲ್ಲಿ ವಿಮೆ ಕಂಪನಿ ಏಜೆಂಟ್‌ರು ಭಾಗಿಯಾಗಿರುವುದು ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಉನ್ನತ ಮಟ್ಟದಲ್ಲಿ ಈಪ್ರಕರಣ ತನಿಖೆ ಆಗಬೇಕು. ಪ್ರತಿವರ್ಷ ರೈತರಿಗೆ ವಿಮೆ ಹಣದಲ್ಲಿ ಮೋಸ ಆಗುತ್ತಲೇ ಇದೆ. ಜಿಲ್ಲಾಡಳಿತ ಸಮಸ್ಯೆ ಕುರಿತು ಗಂಭೀರವಾಗಿ ಪರಿಗಣಿಸುವ ಜತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣ ದಾಖಲಾಗಿದ್ದರೂ ಇಲ್ಲಿವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು. ವಿಮೆ ಹಣ ದುರ್ಬಳಿಕೆ ಹಿನ್ನೆಲೆ 36 ಜನ ಆರೋಪಿಗಳು ಬಂಧಿಸಬೇಕು. ಒಂದು ವೇಳೆ ಅಲಕ್ಷ್ಯ ಮನೋಭಾವನೆ ತಾಳಿದ ಪರಿಣಾಮ ಜಿಲ್ಲಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮರಿಲಿಂಗ ಪಾಟೀಲ್, ತಿಮ್ಮನಗೌಡ ಗೌರಂಪೇಟೆ, ಸೂಗೂರಡ್ಡಿ, ಮಲ್ಲೇಶ ನಾಯಕ, ಮಾರುತಿ ನಾಯಕ, ಶರಣು ಸೇರಿದಂತೆ ಇತರರು ಇದ್ದರು.

Share this article