ಅಲ್ಪಸಂಖ್ಯಾತರ ವಿಶೇಷ ಮೀಸಲಾತಿ ಅನುದಾನ ರದ್ದುಗೊಳಿಸಲು ಮನವಿ

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರಿಗೆ ನೀಡಿರುವ ರು. ೪೫೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮತ್ತು ಸರ್ಕಾರಿ ಗುತ್ತಿಗೆಯಲ್ಲಿ ಶೇ.೪ ಮೀಸಲಾಗಿ ನೀಡಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರಿಗೆ ನೀಡಿರುವ ರು. ೪೫೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮತ್ತು ಸರ್ಕಾರಿ ಗುತ್ತಿಗೆಯಲ್ಲಿ ಶೇ.೪ ಮೀಸಲಾಗಿ ನೀಡಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಸರಕಾರವು ಇತ್ತಿಚೇಗೆ ತನ್ನ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾದ ಅನುದಾನವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮುಸಲ್ಮಾನ ಕಾಲನಿಗಳಿಗೆ ರು. ೧೦೦೦ ಕೋಟಿ, ಮುಸಲ್ಮಾನ ಇಮಾಮರಿಗೆ ಮಾಸಿಕ ರು. ೬ಸಾವಿರ ವೇತನ, ಮುಸಲ್ಮಾನ ಹೆಣ್ಣುಮಕ್ಕಳ ಮದುವೆಗೆ ರು.೫೦ ಸಾವಿರ, ಮುಸಲ್ಮಾನ ವಿದ್ಯಾರ್ಥಿಗಳ ವಿದೇಶೀ ಶಿಷ್ಯವೇತನಕ್ಕೆ ರು. ೩೦ ಲಕ್ಷ , ಮುಸಲ್ಮಾನ ಹೆಣ್ಣುಮಕ್ಕಳಿಗೆ ಆತ್ಮ ರಕ್ಷಣೆ ತರಬೇತಿ, ವಕ್ಸ್ ಬೋರ್ಡ್ ಆಸ್ತಿ ರಕ್ಷಣೆಗೆ ರು. ೧೫೦ ಕೋಟಿ ಅನುದಾನ, ಮುಸಲ್ಮಾನರು ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಐಟಿಐ ಕಾಲೇಜಿಗೆ ಮಂಜೂರಾತಿ, ೧೦೦ ಉರ್ದುಶಾಲೆಗಳ ಸ್ಥಾಪನೆ, ಮುಸಲ್ಮಾನ ಯುವಕರ ಸ್ಟಾರ್ಟ್ ಆ್ಯಪ್‌ಗೆ ಸರಕಾರೀ ಸಹಾಯದನ, ಮುಸಲ್ಮಾನ ಮಕಳಿಗೆ ಪ್ರತಿ ಪರ ತರಬೇತಿ, ಹಜ್ ಭವನಕ್ಕೆ, ಅನುದಾನ. ಹೀಗೆ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನೆಪದಲ್ಲಿ ರು. ೪೫೦೦ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದಲ್ಲದೆ ಸರ್ಕಾರದ ಟೆಂಡರ್ ಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.4 ಮೀಸಲಾತಿ ನೀಡುವ ಮಸೂದೆ ಸಹ ಮಂಡಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲದಿರುವಾಗಲೂ, ಸರ್ಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಸಂವಿಧಾನಬಾಹಿರ ಮೀಸಲಾತಿ ನೀಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ೩೪ ಸಾವಿರ ಸಿ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ಯಾವುದೇ ಸಂಬಳ ಇಲ್ಲ. ಆದರೆ ಇಮಾಮ್‌ರಿಗೆ ರು. ೬ ಸಾವಿರ ಅನುದಾನ ನೀಡಲಾಗಿದೆ. ಅದಲ್ಲದೆ ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ನ ಸಾವಿರಾರು ದೇವಸ್ಥಾನಗಳು ಜೀರ್ಣೋದ್ದಾರ, ಸುಣ್ಣ ಬಣ್ಣ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿವೆ. ಆದರೆ ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಯಾವುದೇ ಅನುದಾನವಿಲ್ಲ. ಹೀಗೆ ಸರ್ಕಾರವು ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಒಂದೇ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುವುದು ಭಾರತದ ಸಂವಿಧಾನದ ಕಲಂ ೧೪, ೧೫ ರ ಉಲ್ಲಂಘನೆಯಾಗಿದೆ. ಹಾಗಾಗಿ ಸರ್ಕಾರದ ಈ ವರ್ಷದ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪುತ್ತೂರು ಸಹಾಯಕ ಆಯುಕ್ತರ ಸಹಾಯಕ ಪೂವಪ್ಪ ಮನವಿ ಸ್ವೀಕರಿಸಿದರು. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಬಾಲಚಂದ್ರ ಸೊರಕೆ, ರಾಜೇಶ್ ಪುತ್ತೂರು, ಸತೀಶ್ ಕರ್ವೆಲ್, ಶ್ರೀಧರ ಪೂಜಾರಿ, ಜಗದೀಶ್ ಶೆಟ್ಟಿ ಸುತ್ರಬೆಟ್ಟು, ನಾರಾಯಣ ಮಿತ್ತೂರು, ಕರ್ನಾಟಕ ಮಂದಿರ ಮಹಾ ಸಂಘದ ಜಿಲ್ಲಾ ಸಮನ್ವಯಕ ಬಾಲಕೃಷ್ಣ ಗೌಡ ನೆಲ್ಯಾಡಿ, ಹಿಂದೂ ಜನಜಾಗೃತಿ ಸಮಿತಿಯ ದಾಮೋದರ, ಚಂದ್ರಶೇಖರ ಫನಿತೋಟ, ತಾರಾನಾಥ ಗೌಡ ಮತ್ತು ದಯಾನಂದ ಹೆಗ್ಡೆ ಇದ್ದರು.

Share this article