ಕನ್ನಡಪ್ರಭ ವಾರ್ತೆ ತುಮಕೂರು
ಇಸ್ಲಾಮಿಕ್ ಸ್ಟೂಡೆಂಟ್ ಅರ್ಗನೈಜೇಷನ್ ಅಫ್ ಇಂಡಿಯಾದ ತುಮಕೂರು ಜಿಲ್ಲಾಧ್ಯಕ್ಷ ಮೊಹಮದ್ ಖಲೀಲ್ ಖಾನ್, ಕಾರ್ಯದರ್ಶಿ ಮೊಹಮದ್ ಕೈಫ್, ಪದಾಧಿಕಾರಿಗಳಾದ ಜೈದ್ ಅಹಮದ್, ಇಬ್ರಾಹಿಂ ಸಯೀದ್ ಅವರ ನಿಯೋಗವೂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ ಅವರಿಗೆ ಸಲ್ಲಿಸಿದರು.
ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಜಾರಿಗೊಳ್ಳುತ್ತಿರುವ ವಿವಿಧ ರೀತಿಯ ವಿದ್ಯಾರ್ಥಿವೇತನ, ಶಿಷ್ಯವೇತನ, ಪ್ರೋತ್ಸಾಹ ಧನ, ಉತ್ತೇಜನದಂತಹ ಕಾರ್ಯಕ್ರಮ, ಯೋಜನೆಗಳಿಗೆ ಸೂಕ್ತ ಅನುದಾನ ಸಿಗದೆ ಸಮರ್ಪಕ ಜಾರಿಯಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.2023-24 ರ ಜುಲೈ ತಿಂಗಳಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ ಸುಮಾರು 2100 ಕೋಟಿ ರು. ಅನುದಾನವನ್ನು ಒದಗಿಸಲಾಗಿತ್ತು, ಇದರಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಅಂದಾಜು 1700 ಕೋಟಿ ರು. ಹಂಚಿಕೆ ಮಾಡಿತ್ತು. ಈ ಅನುದಾನದಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಮೆರಿಟ್ ಕಮ್ ಮೀನ್ಸ್(ಒಅಒ), ನ್ಯಾಷನಲ್ ಓವರ್ಸೀಸ್ ಸ್ಕಾಲರ್‌ಶಿಪ್ ಹಾಗೂ ಎಂ.ಫಿಲ್ ಮತ್ತು ಪಿಎಚ್‌ಡಿ ಫೆಲೋಶಿಪ್ ಅನ್ನು ನೀಡಲು 160 ಕೋಟಿ ರು. ನಿಯೋಜಿಸಲಾಗಿದೆ. ಆದರೆ ಕಳೆದ ೬ ತಿಂಗಳ ಅವಧಿಯಲ್ಲಿ ನಿರ್ದೇಶನಾಲಯಕ್ಕೆ ಬಿಡುಗಡೆಗೊಂಡಿದ್ದು ಕೇವಲ 73.32 ಕೋಟಿ ರು. ಇದರಲ್ಲಿ ವೆಚ್ಚವಾದದ್ದು, ಖರ್ಚಾದದ್ದು 7.21 ಕೋಟಿ ರು. ಮಾತ್ರ. ಇದು ಒಟ್ಟು ಮೀಸಲಿದ್ದ ಅನುದಾನದ ಪೈಕಿ ಶೇ.1 ರಷ್ಟು ಮಾತ್ರ ಅನುದಾನ ಬಳಕೆಯಾಗಿದೆ.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಚಾಲ್ತಿಯಲ್ಲಿರುವ ವಿವಿಧ ವಿದ್ಯಾರ್ಥಿ ವೇತನದ ಕಾರ್ಯಕ್ರಮಗಳಿಗೆ ಅಗತ್ಯ ಮತ್ತು ತುರ್ತು ಅನುದಾನ ಬಿಡುಗಡೆ ಮಾಡಿ, ವಿದ್ಯಾರ್ಥಿಗಳ ಕಲಿಕೆಗೆ ಸಹಕರಿಸುವಂತೆ ಮನವಿಯಲ್ಲಿ ಕೋರಿದ್ದಾರೆ.