ಅಕಾಲಿಕ ಮಳೆಯಿಂದ ಬೆಳೆಹಾನಿ-ಪರಿಹಾರಕ್ಕೆ ಸಿಎಂಗೆ ಮನವಿ

KannadaprabhaNewsNetwork |  
Published : Dec 08, 2024, 01:17 AM IST
೭ಎಸ್.ಆರ್.ಎಸ್೧ಪೊಟೋ೧ (ತಾಲೂಕಿನ ನೆಗ್ಗು ಪಂಚಾಯತದ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿತು.)೭ಎಸ್.ಆರ್.ಎಸ್೧ಪೊಟೋ೨ (ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.)೭ಎಸ್.ಆರ್.ಎಸ್೧ಪೊಟೋ೩ (ಸಿದ್ಧಿವಿನಾಯಕ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.) | Kannada Prabha

ಸಾರಾಂಶ

ಶಿರಸಿ ತಾಲೂಕಿನ ನೆಗ್ಗು ಪಂಚಾಯಿತಿಯ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಶನಿವಾರ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.

ಶಿರಸಿ: ತಾಲೂಕಿನ ನೆಗ್ಗು ಪಂಚಾಯಿತಿಯ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಚೇರಿಯ ನೂತನ ಕಟ್ಟಡ ಶನಿವಾರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡು ಜನಸೇವೆಗೆ ತೆರೆದುಕೊಂಡಿತು.

ಸಿದ್ಧಿವಿನಾಯಕ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಿಂದ ಗ್ರಾಪಂ ಮಟ್ಟದಲ್ಲಿ ರಸ್ತೆಗಳು ಹಾಳಾಗಿರುವುದು ಗಮನಕ್ಕಿದೆ. ಅಕಾಲಿಕ ಮಳೆಯಿಂದ ಭತ್ತ, ಅಡಕೆ ಬೆಳೆ ಹಾನಿಯಾಗಿರುವುದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಹಾರ ನೀಡುವಂತೆ ವಿನಂತಿಸಿದ್ದೇನೆ. ಫಾರಂ ನಂಬರ್ ೩, ಇ-ಸ್ವತ್ತು, ಬ ಕರಾಬ್ ಸೇರಿದಂತೆ ಅನೇಕ ಸಮಸ್ಯೆಗಳೂ ಹಿಂದೆಯೂ ಇತ್ತು. ಆಗ ಶಾಸಕರು ಅಧಿವೇಶನದಲ್ಲಿ ಯಾಕೆ ಧ್ವನಿ ಎತ್ತಿಲ್ಲ? ಹೊರ ದೇಶದಿಂದ ಅಕ್ರಮವಾಗಿ ಅಡಕೆ ಆಗದಾಗುತ್ತಿದೆ. ಇದರ ಕುರಿತು ಯಾಕೆ ಸಂಸದರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಗ್ರಾಮ ಪಂಚಾಯಿತಿ ಸ್ಥಳೀಯ ಸರ್ಕಾರವಾಗಿದ್ದು, ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಪಂಗಳು ಪ್ರಭಾವಿ ಸರ್ಕಾರವಾಗಿರುತ್ತದೆ. ಗ್ರಾಪಂ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ ಎಂದರು.

ಗ್ರಾಪಂ ಅಧ್ಯಕ್ಷ ಲಾಜರ್ ಸಿಲ್ವೆಸ್ಟರ್ ರೆಬೆಲ್ಲೋ, ಉಪಾಧ್ಯಕ್ಷೆ ಸಾವಿತ್ರಿ ಮಡಿವಾಳ, ಸದಸ್ಯರಾದ ಸುರೇಶ ಹೆಗಡೆ, ಚಂದ್ರಕಾಂತ ಹೆಗಡೆ, ಮಂಜುನಾಥ ಗೌಡ, ಕೃಷ್ಣ ಗೌಡ, ಸರಸ್ವತಿ ಹೆಗಡೆ, ಮಂಜುಳಾ ಪಾವಸ್ಕರ, ಜ್ಯೋತಿ ಹೆಗಡೆ, ಲಲಿತಾ ಮುಕ್ರಿ, ನೇತ್ರಾವತಿ ಹೆಗಡೆ, ನಾಗವೇಣಿ ಆಚಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಎಂಜಿನಿಯರ್ ಬಸವರಾಜ ಬಳ್ಳಾರಿ ಇದ್ದರು.

ಶಾಸಕರಿಂದ ತರಾಟೆ: ನೆಗ್ಗು ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ವೇಳೆ ಕೆಲಸಮಯ ರಾಜಕೀಯ ಕೆಸರಾಟ ನಡೆಯಿತು. ಶಾಸಕರು ಉದ್ಘಾಟನೆಗೆ ಆಗಮಿಸಿದ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟಕ್ಕೂ ಕಾರಣವಾಯಿತು. ಶಿಷ್ಟಾಚಾರ ಪಾಲನೆಯಲ್ಲಿ ಲೋಪವಾಗಿದೆ. ಗ್ರಾಪಂ ಮಟ್ಟದಲ್ಲಿ ರಾಜಕೀಯ ಪ್ರವೇಶ ಮಾಡಬಾರದೆಂದು ಸಿಡಿಮಿಡಿಗೊಂಡ ಶಾಸಕರು ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.ಅಧಿಕಾರಿಗಳ ವಿರುದ್ಧ ರೇಗಾಡಿದ ಶಾಸಕ: ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸೌಜನ್ಯಕ್ಕೂ ಸ್ವಾಗತಿಸಿಲ್ಲ. ಸಭಾ ಕಾರ್ಯಕ್ರಮ ಎಲ್ಲಿ ನಡೆಯುತ್ತದೆ ಎಂದು ಸರಿಯಾಗಿ ತಿಳಿಸುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಸಿಟ್ಟಾದ ಶಾಸಕರು ಕಾರು ಹತ್ತಿ ಹೊರಡಲು ಸಿದ್ಧರಾದರು. ಆಗ ಸ್ಥಳದಲ್ಲಿದ್ದ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಆಮಂತ್ರಣ ಪತ್ರಿಕೆಯಲ್ಲಿ ಸಭಾ ಕಾರ್ಯಕ್ರಮ ಎಲ್ಲಿ ನಡೆಯುತ್ತದೆ ಎಂದು ಹಾಕಿದ್ದೇವೆ. ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿದಾಗ ಸಿಟ್ಟಿನಿಂದಲೇ ಸಭಾ ಕಾರ್ಯಕ್ರಮಕ್ಕೆ ತೆರಳಿ, ದೀಪ ಹಚ್ಚಿ ಉದ್ಘಾಟನೆಯನ್ನೂ ಮಾಡದೇ ವೇದಿಕೆಯಲ್ಲಿದ್ದವರ ಬಳಿ ಉದ್ಘಾಟನೆ ಮಾಡಿಸಿದರು. ರಾಜಕೀಯ ಮಾಡಿದರೆ ಹುಷಾರ್!: ರಾಜಕೀಯ ಮಾಡಲು ನನ್ನನ್ನು ಇಲ್ಲಿಗೆ ಕರೆದಿರುವುದಾ? ಯಾವನು ಪಿಡಿಒ, ಕಾರ್ಯದರ್ಶಿ ಎಂದು ಏಕವಚನದಲ್ಲಿ ಕರೆದು, ತಾಪಂ ಇಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ೨೪ ಗಂಟೆಯೊಳಗಡೆ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ಹೊರಗೆ ಹಾಕಿ ಎಂದು ಸೂಚಿಸಿದರು. ಗ್ರಾಪಂ ಕಟ್ಟಡ ಉದ್ಘಾಟನೆಯನ್ನೂ ನಿರಾಕರಿಸಿ, ಅಧ್ಯಕ್ಷರಿಂದಲೇ ರಿಬ್ಬನ್ ಕಟ್‌ ಮಾಡಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ