ಹಾವೇರಿ: ಜಿಲ್ಲೆಯಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ಅಧ್ಯಯನ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಆತ್ಮರಕ್ಷಣಾ ಕಲೆಯ ತರಬೇತಿ ನೀಡುತ್ತಿರುವ ಕರಾಟೆ ತರಬೇತುದಾರರನ್ನು ಕರಾಟೆ ಶಿಕ್ಷಕರಂತೆ ಪರಿಗಣಿಸಬೇಕು. ಮೂರು ಶಾಲೆಗೆ ಒಬ್ಬ ಕರಾಟೆ ತರಬೇತುದಾರರನ್ನು ನೇಮಕ ಮಾಡುವ ಮೂಲಕ ಸರ್ಕಾರ ಕರಾಟೆ ತರಬೇತುದಾರರಿಗೂ ಗೌರವ ಕಲ್ಪಿಸಬೇಕು ಎಂದು ಜಿಲ್ಲಾ ಸ್ಪೋರ್ಟ್ ಕರಾಟೆ ಸಂಸ್ಥೆ ಅಧ್ಯಕ್ಷ ನಾರಾಯಣ ಪೂಜಾರ ಮನವಿ ಮಾಡಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಮೂರು ತಿಂಗಳಲ್ಲಿ 12 ತರಗತಿಗಳನ್ನು ಮಾತ್ರ ನಮಗೆ ನೀಡಲಾಗುತ್ತಿದೆ. ಇದರಿಂದ ಪ್ರಾಥಮಿಕ ತರಬೇತಿ ಮಾತ್ರ ಸಾಧ್ಯವಾಗಲಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇದು ಕನಿಷ್ಠ 1 ವರ್ಷದ ಅವಧಿಗೆ ತರಬೇತಿ ಅಗತ್ಯವಿದೆ. ಅದರಲ್ಲಿ ಪ್ರಮುಖವಾಗಿ ಕೇವಲ 12 ಪಂಚ್‌ಗಳನ್ನು ಮಾತ್ರ ತುರ್ತು ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗೆ ಬಳಸುವ ಪ್ರಾಥಮಿಕ ಹಂತಗಳಾಗಿದ್ದು, ಅವುಗಳ ನಿರಂತರ ಪ್ರಾಕ್ಟೀಸ್ ಮಾಡಬೇಕಿದೆ. ಆಗ ಮಾತ್ರ ಇವು ಹೆಣ್ಣುಮಕ್ಕಳ ಅಸ್ತ್ರಗಳಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ ಎಂದು ಒತ್ತಾಯಿಸಿದರು.ಕರಾಟೆ ಪಂದ್ಯಾವಳಿಯಲ್ಲಿ ಅನುಸರಿಸಬೇಕಾದ ನಿಯಮಾವಳಿಗಳನ್ನು ನಾವು ಜಪಾನ್ ಮತ್ತು ಇರಾನ್‌ನಿಂದ ತರಬೇತುದಾರರನ್ನು ಕರೆಸಿ ಮಾಹಿತಿ ಕೊಡಿಸಿದ್ದೇವೆ. ರೆಫ್ರಿ ತರಬೇತಿಯಲ್ಲಿ ಪ್ರಕಾಶ ಉಜನಿಕೊಪ್ಪ ಮತ್ತು ಸಲೀಂ ಪಟವೇಗಾರ ತೇರ್ಗಡೆಯಾಗಿದ್ದಾರೆ. ಇನ್ನು ಗುಣಮಟ್ಟ ತರಬೇತಿಯನ್ನು ನೀಡಲು ಬದ್ಧರಾಗಿದ್ದೇವೆ. ಅಲ್ಲದೇ ಇತ್ತೀಚೆಗೆ ದುಬೈನಲ್ಲಿ ನಡೆದ ವರ್ಲ್ಡ್ ಕರಾಟೆ ಫೆಡರೇಷನ್ ಕೋಚ್ ಪರೀಕ್ಷೆಯಲ್ಲಿ ಬ್ಯಾಡಗಿಯ ಮನಿಷಾ ಎಂ. ಕಬ್ಬೂರ ತೇರ್ಗಡೆಯಾಗಿ ಅಂತಾರಾಷ್ಟ್ರೀಯ ಕರಾಟೆ ಕೋಚ್ ಎಂದು ಅರ್ಹತೆ ಪಡೆದ ರಾಜ್ಯದ ಮೊದಲ ಮಹಿಳೆಯಾಗಿದ್ದು, ಅವರು ಹಾವೇರಿ ಜಿಲ್ಲೆಯವರು ಎಂಬುದು ನಮ್ಮ ಸಂಸ್ಥೆಗೆ ಹೆಮ್ಮೆ ಮೂಡಿಸಿದೆ ಎಂದರು.ಸಮಗ್ರ ಶಿಕ್ಷಣ ಇಲಾಖೆ ಉಪಸಮನ್ವಯಾಧಿಕಾರಿ ಲತಾಮಣಿ ಟಿ.ಎಂ. ಮಾತನಾಡಿ, ಶಾಲಾ ಶಿಕ್ಷಣ ಮತ್ತು ಸಮಗ್ರ ಶಿಕ್ಷಣದ ಅಡಿ ಆತ್ಮರಕ್ಷಣಾ ಪ್ರಶಿಕ್ಷಣ ಕಲೆ ಅಡಿಯಲ್ಲಿ ಎಲ್ಲಾ ಪ್ರೌಢ ಮತ್ತು ಪಿಯುಸಿ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಪ್ರಮುಖ 12 ಪಂಚ್‌ಗಳ ತರಬೇತಿಯನ್ನು ಕರಾಟೆ ಶಿಕ್ಷಕರಿಂದ ತರಬೇತಿ ನೀಡಲಾಗಿದೆ ಎಂದರು.ಕರಾಟೆ ತೀರ್ಪುಗಾರರ ಸಂಘದ ಅಧ್ಯಕ್ಷ ಪ್ರಕಾಶ ಉಜನಿಕೊಪ್ಪ ಮಾತನಾಡಿ, ಒಬ್ಬ ಕರಾಟೆ ತರಬೇತುದಾರನನ್ನು ಮೂರು ಶಾಲೆಗಳಲ್ಲಿ ಖಾಯಂ ಆಗಿ ಕರಾಟೆ ಶಿಕ್ಷಕರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪವನಕುಮಾರ ಜೆ., ಸಲೀಂ ಪಟವೇಗಾರ, ವೀರೇಶ ಸೊಪ್ಪಿನಮಠ, ನಾಗರಜ ಸುಣಗಾರ, ದಿಳ್ಳೆಪ್ಪ ಅಂಬಿಗೇರ ಸೇರಿದಂತೆ ಹಲವರು ಇದ್ದರು.