ಕಾರವಾರ: ಶಿಕ್ಷಣದ ವ್ಯಾಪಾರೀಕರಣವನ್ನು ವಿರೋಧಿಸಿ, ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಒತ್ತಾಯಿಸುವುದರ ಜತೆಗೆ ತಾಲೂಕಿನ ಶೈಕ್ಷಣಿಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ನ 14ನೇ ಕಾರವಾರ ತಾಲೂಕು ಸಮ್ಮೇಳನ ಇತ್ತೀಚೆಗೆ ನಡೆಯಿತು. ಸಮ್ಮೇಳನದ ಆರಂಭದಲ್ಲಿ ತಾಲೂಕು ಸಂಚಾಲಕ ವೀರೇಶ್ ರಾಠೋಡ್ ಎಸ್‌ಎಫ್‌ಐ ಧ್ವಜಾರೋಹಣ ನೆರವೇರಿಸಿದರು. ಪ್ರಗತಿಪರ ಚಿಂತಕ ಹಾಗೂ ಲೇಖಕ ಎನ್.ಜಿ. ನಾಯ್ಕ ಅವರು ತಮಟೆ ಬಾರಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್.ಜಿ. ನಾಯ್ಕ ಅವರು, ನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ವ್ಯವಸ್ಥೆ ಇಂದು ಇಲ್ಲದಂತಾಗಿದೆ. ಶಿಕ್ಷಣ ನೀತಿಗಳನ್ನು ರೂಪಿಸುವಾಗ ಶಿಕ್ಷಕರು, ಉಪನ್ಯಾಸಕರು, ಶಿಕ್ಷಣತಜ್ಞರು ಹಾಗೂ ಶಿಕ್ಷಣಪ್ರೇಮಿಗಳ ಅಭಿಪ್ರಾಯಗಳ ಜತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯಗಳನ್ನೂ ಪರಿಗಣಿಸಬೇಕು. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಯುವಜನರ ಅಭಿಪ್ರಾಯಗಳನ್ನು ಪರಿಗಣಿಸದೆ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದರು.ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಹಾಗೂ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್ ಮಾತನಾಡಿ, ರಾಜ್ಯದ ಶೈಕ್ಷಣಿಕ ವಲಯದಲ್ಲಿನ ಹಲವು ಸಮಸ್ಯೆಗಳ ವಿರುದ್ಧ ಎಸ್‌ಎಫ್‌ಐ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಶಾಲೆಗಳ ಉಳಿವಿಗಾಗಿ ಶೈಕ್ಷಣಿಕ ಜಾಥಾ, ಬೆಳಗಾವಿ ಚಲೋ ಸೇರಿದಂತೆ ವಿವಿಧ ಹೋರಾಟಗಳನ್ನು ನಡೆಸಲಾಗಿದೆ. ಹಾಸ್ಟೆಲ್‌ಗಳಲ್ಲಿ ಪೌಷ್ಟಿಕ ಆಹಾರ, ಶಾಲಾ- ಕಾಲೇಜುಗಳಿಗೆ ಮೂಲಸೌಕರ್ಯ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಘಟನೆ ಹೋರಾಟ ನಡೆಸುತ್ತಿದೆ ಎಂದರು. ಕಾರ್ಮಿಕ ಸಂಘಟನೆ ಸಿಐಟಿಯು ನಾಯಕಿ ಯಮುನಾ ಗಾಂವ್ಕರ್ ಸಮ್ಮೇಳನಕ್ಕೆ ಶುಭ ಹಾರೈಸಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ವೀರೇಶ್ ವಹಿಸಿದ್ದರು. ನಂತರ ನೂತನ 25 ಸದಸ್ಯರ ತಾಲೂಕು ಸಮಿತಿಯನ್ನು ರಚಿಸಲಾಯಿತು. ತಾಲೂಕು ಅಧ್ಯಕ್ಷರಾಗಿ ಶೇಕಪ್ಪ ಪಿ., ಕಾರ್ಯದರ್ಶಿಯಾಗಿ ಅರ್ಜುನ ಚವ್ಹಾಣ ಆಯ್ಕೆಯಾಗಿದ್ದು, 11 ಪದಾಧಿಕಾರಿಗಳು ಸೇರಿದಂತೆ ಒಟ್ಟು 25 ಸದಸ್ಯರ ಸಮಿತಿಯನ್ನು ಸಮ್ಮೇಳನ ಆಯ್ಕೆ ಮಾಡಿತು. ಹಾಸ್ಟೆಲ್ ಘಟಕದ ರಾಜ್ಯ ಉಪಸಮಿತಿ ಸದಸ್ಯ ಶೇಕಪ್ಪ ಪಿ. ಸ್ವಾಗತಿಸಿದರು. ಪಿಜಿ ಘಟಕದ ಯಲ್ಲಪ್ಪ ಕಾರ್ಯಕ್ರಮ ನಿರೂಪಿಸಿದರು. ಶಶಿ ಕೆ., ರಾಹುಲ್, ಅರ್ಜುನ್, ಮನೋಜ್, ರಾಮಚಂದ್ರ, ಮೆಹತಾಬ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.