ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶುದ್ಧವಾದ ನೀರಲ್ಲಿ ಬೆಳೆದ ಸೊಳ್ಳೆಗಳು ಹಗಲು ಹೊತ್ತು ಕಚ್ಚುವುದರಿಂದ ಡೆಂಘೀ ಜ್ವರ ಮತ್ತು ಚಿಕನ್ ಗುನ್ಯಾ ಬರುವ ಸಾಧ್ಯತೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ಇಲ್ಲಿನ ಬುದ್ಧನಗರ ಆರೋಗ್ಯ ಕೇಂದ್ರದಲ್ಲಿ ಡೆಂಘೀ ಜ್ವರ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಚಿತ್ರದುರ್ಗ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಹಾಸ್ಟೆಲ್ ವಾರ್ಡನ್‍ಗಳಿಗೆ ಆಯೋಜಿಸಿದ್ದ ಅಡ್ವೊಕೆಸಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ಮಳೆಗಾಲವಾದ್ದರಿಂದ ಮನೆಯ ಹೊರಗಡೆ ಘನತ್ಯಾಜ್ಯ ವಸ್ತುಗಳಲ್ಲಿ ಶುದ್ಧ ನೀರು ಶೇಖರಣೆಯಾಗುತ್ತಿದೆ. ಡೆಂಘೀ ಜ್ವರಕ್ಕೆ ನಿಗಧಿತವಾದ ಚಿಕಿತ್ಸೆ ಇಲ್ಲದಿದ್ದು ಮುಂಜಾಗ್ರತೆ ಬಹುಮುಖ್ಯ. ಘನತ್ಯಾಜ್ಯ ವಿಲೇವಾರಿ ಮನೆಯಲ್ಲಿನ ನೀರಿನ ತಾಣಗಳ ಸ್ವಚ್ಛತೆ ಕಾಪಾಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ರೋಗ ಬಾರದಂತೆ ನಿಗಾ ವಹಿಸಬೇಕೆಂದರು.
ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಕಡಿ ಮಾಹಿತಿ ನೀಡಿ ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಸರ್ವೆ ಕೈಗೊಂಡು ಸಾರ್ವಜನಿಕರಿಗೆ ಸೊಳ್ಳೆಯಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಘೀ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿ, ಗ್ರಾಮಗಳಲ್ಲಿ ಅವರವರ ಮನೆಯ ಮುಂದೆ ಸಾರ್ವಜನಿಕರು ಸ್ವಚ್ಛತೆ ಕಾಪಾಡಲು ತಿಳಿಸಬೇಕು. ನೀರು ನಿಲ್ಲದಂತೆ ನಿಗಾವಹಿಸಬೇಕು. ಕಟ್ಟಡ ನಿರ್ಮಾಣ ಪ್ರದೇಶ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ನೀರಿನ ಸಂಗ್ರಹಣ ತಾಣಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಬೇಕು. ರೋಗ ಹರಡದಂತೆ ಸಾರ್ವಜನಿಕರ ಸಹಕಾರದಿಂದ ಮುಂಜಾಗ್ರತೆ ವಹಿಸಬೇಕು ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ವೈದ್ಯಾಧಿಕಾರಿ ಡಾ.ಸುರೇಂದ್ರ. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್ ಕುಮಾರ್, ಪಾರ್ವತಿ, ಕೇಶವ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್‍ಗಳು, ಆರೋಗ್ಯ ಸಿಬ್ಬಂದಿಗಳಾದ ಅಕ್ಷಯ್, ನಿಂಗೇಶ್ ಇದ್ದರು.