ಕನ್ನಡಪ್ರಭ ವಾರ್ತೆ ಕೊಪ್ಪ
ಜಂಟಿ ಸರ್ವೇ ಪೂರ್ಣಗೊಂಡು ಅಂತಿಮ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಬೆಳೆ ಇರುವ ಯಾವುದೇ ಕೃಷಿ ಜಮೀನುಗಳನ್ನು ಖುಲ್ಲಾ ಮಾಡದಂತೆ ಕ್ರಮವಹಿಸುವಂತೆ ಶುಕ್ರವಾರ ಕೊಪ್ಪ ಅರಣ್ಯ ಉಪ ಸಂರಕ್ಷಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು. ಆರಣ್ಯ ಒತ್ತುವರಿ ಖುಲ್ಲಾ ಮಾಡುತ್ತಿರುವ ಬಗ್ಗೆ ರೈತ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿರುತ್ತದೆ. ಈಗಾಗಲೇ ಸರ್ಕಾರಿ ಆದೇಶದಂತೆ ಒತ್ತುವರಿ ಮಾಡಿರುವ ಅನೇಕರು ಕ್ರಮವಾಗಿ ಫಾರಂ ನಂ.೫೦, ೫೩, ೫೭ರಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಜಮೀನುಗಳನ್ನು ಸಾಗುವಳಿ ಮಾಡಿ ಫಸಲು ತೆಗೆಯುತ್ತಿದ್ದಾರೆ. ಈಗ ಈ ಪ್ರಕರಣಗಳು ಮಂಜೂರಿ ಹಂತಕ್ಕೆ ಬಂದಿರುತ್ತದೆ. ಆದರೆ ರೈತರು ಕೃಷಿ ಮಾಡುತ್ತಿರುವ ಜಮೀನುಗಳನ್ನು ಅರಣ್ಯ ಇಲಾಖೆಯಿಂದ ಖುಲ್ಲಾ ಮಾಡಿಸಲಾಗುತ್ತದೆಯೆಂದು ತಿಳಿದು ಬಂದಿರುತ್ತದೆ.ಸರ್ಕಾರಿ ಅರಣ್ಯ ಮತ್ತು ರೆವಿನ್ಯೂ ಇಲಾಖೆ ಜಮೀನುಗಳನ್ನು ಪ್ರತ್ಯೇಕಿಸಲು ಜಂಟಿ ಸರ್ವೇ ನಡೆಸುವಂತೆ ಸರ್ಕಾರದಿಂದ ಆದೇಶವಾಗಿರುತ್ತದೆ. ಆದ್ದರಿಂದ ಸದರಿ ಜಂಟಿ ಸರ್ವೇ ಪೂರ್ಣಗೊಂಡು ನಕ್ಷೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಪರಸ್ಪರ ಒಪ್ಪಿಗೆ ಆಗುವವರೆಗೆ ಯಾವುದೇ ಜಮೀನುಗಳನ್ನು ಖುಲ್ಲಾ ಮಾಡಬಾರದಾಗಿ ಕೋರುತ್ತೇವೆ. ಅರಣ್ಯ ತಕ್ಷೀರ್‌ಗಳಿಗೆ ಒಳಪಟ್ಟ ಜಮೀನುಗಳನ್ನು ಖುಲ್ಲಾ ಮಾಡಿಸಲು ಆದೇಶವಾಗಿದ್ದರೂ, ರೈತರಿಗೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೂ ಅದಕ್ಕೆ ಅವಕಾಶ ನೀಡದೇ ಒತ್ತುವರಿ ಖುಲ್ಲಾ ಮಾಡಿಸಲಾಗುತ್ತಿದೆ.
ಅರಣ್ಯ ಕಾಯಿದೆ ಸೆಕ್ಷನ್ (೪)ರ ವ್ಯಾಪ್ತಿಗೆ ಸೇರಿಸಲಾಗಿರುವ ಆದರೆ ರೈತರ ಸ್ವಾಧೀನಾನುಭವದಲ್ಲಿರುವ ಜಮೀನನ್ನು ಅರಣ್ಯ ಇಲಾಖೆಯವರು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ರೈತರ ಆಕ್ಷೇಪಣೆ ಇದ್ದಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಕಳೆದ ೩-೪ ವರ್ಷಗಳಿಂದ ರೈತರು ಸದರಿ ಅಧಿಕಾರಿಯವರ ಸಮಕ್ಷಮದಲ್ಲಿ ತಮ್ಮ ಅಹವಾಲು ಆಕ್ಷೇಪಣೆಗಳನ್ನು ಸಲ್ಲಿಸಿಕೊಂಡಿರುತ್ತಾರೆ. ಈ ವಿಚಾರದಲ್ಲಿ ಇಲಾಖೆಯಿಂದ ಈವರೆಗೂ ಯಾವುದೇ ಫಲದಾಯಕ ಕ್ರಮ ಕೈಗೊಂಡಿರುವುದಿಲ್ಲ. ಇದೀಗ ರೈತರಿಂದ ಒತ್ತುವರಿಯಾಗಿರುವ ಸರ್ಕಾರಿ ಭೂ ಪ್ರದೇಶವನ್ನು ಗುತ್ತಿಗೆ ಆಧಾರದಲ್ಲಿ ವಹಿಸಿಕೊಡುವ ಬಗ್ಗೆ ಸರ್ಕಾರಿ ಆದೇಶವಾಗಿರುವುದರಿಂದ ಬಹುತೇಕ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಆರಣ್ಯ ಜಮೀನುಗಳ ಖುಲ್ಲಾ ಪ್ರಕ್ರಿಯೆ ಮುಂದುವರಿಸಿದರೆ, ಜನತೆಯಲ್ಲಿ ಸರ್ಕಾರಗಳ ವಿರುದ್ಧ ತಪ್ಪು ಭಾವನೆ ಉಂಟಾಗುತ್ತದೆ. ಇದರಿಂದ ಸರ್ಕಾರಕ್ಕೆ ಆಗುವ ಮುಜುಗರ ತಪ್ಪಿಸಲು ಜಂಟಿ ಸರ್ವೆ ಪೂರ್ಣಗೊಂಡು ಅಂತಿಮ ಪ್ರಕ್ರಿಯೆ ಪೂರ್ಣಗೊಳಿಸುವವರೆಗೆ ಬೆಳೆ ಇರುವ ಯಾವುದೇ ಕೃಷಿ ಜಮೀನುಗಳನ್ನು ಖುಲ್ಲಾ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿ ನೀಡುವ ಸಂಧರ್ಭದಲ್ಲಿ ಮುಖಂಡರಾದ ಎಚ್.ಎಂ. ನಟರಾಜ್, ಎಚ್.ಎಸ್. ಇನೇಶ್, ಚಿಂತನ್ ಬೆಳಗೊಳ, ಕಾರ್ಗದ್ದೆ ಚಂದ್ರೆಗೌಡ, ಧರೆಕೊಪ್ಪ ರಾಜೇಂದ್ರ, ಹೆಚ್.ಎಂ ಸತೀಶ್, ಟಿ.ಗೋಪಾಲಕೃಷ್ಣ, ಅನ್ನಪೂರ್ಣ ನರೇಶ್, ಬರ್ಕತ್ ಆಲಿ, ವಿಜಯಕುಮಾರ್ ಮುಂತಾದವರಿದ್ದರು.