ಕನ್ನಡಪ್ರಭ ವಾರ್ತೆ ಶಹಾಪುರ
ಬರ ಪರಿಹಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ಬ್ಯಾಂಕ್ ವ್ಯವಸ್ಥಾಪಕರು ರೈತರಿಗೆ ಪ್ರಸ್ತುತ 6 ದಿನಗಳ ಕಾಲ ಬರ ಪರಿಹಾರ ವಿತರಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕ ವತಿಯಿಂದ ನಗರದ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಕಿಸಾನ್ ಸಘಟಕದ ಜಿಲ್ಲಾ ಅಧ್ಯಕ್ಷ ಶಾಂತಗೌಡ ಮುಡಬೂಳ ಮಾತನಾಡಿ, ಸರ್ಕಾರ ಬರ ಪರಿಹಾರ ಅನುದಾನ ಬಿಡುಗಡೆಗೊಳಿಸಿದ್ದು, ಪ್ರಸ್ತುತ ಮಳೆಯಾಗುತ್ತಿದ್ದು, ರೈತರು ಬೀಜ, ಗೊಬ್ಬರ ವ್ಯವಸ್ಥೆ ಮಾಡಿಕೊಳ್ಳುವ ಹಿನ್ನೆಲೆ ಹಣದ ಅಗತ್ಯತೆ ಇರುವುದರಿಂದ ಬರ ಪರಿಹಾರ ಬಂದ ಹಿನ್ನೆಲೆ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಡಿಸಿಸಿ ಬ್ಯಾಂಕ್ ಗೆ ಹಣ ಪಡೆಯಲು ಆಗಮಿಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ ವಾರದ 6 ದಿನಗಳ ಕಾಲ ಬರ ಪರಿಹಾರ ವಿತರಿಸುವ ಕಾರ್ಯ ಮಾಡಿದ್ದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರು ಚಿಂತನೆ ನಡೆಸಿ ಕೂಡಲೇ ರೈತರಿಗೆ ಅನುಕೂಲ ವಾತಾವರಣ ನಿರ್ಮಿಸುವ ಮೂಲಕ ರೈತರಿಗೆ ಸಹಕರಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಈ ವೇಳೆ ರೈತರಾದ ಸಿಂಪಿಗೇರ, ಮೃತ್ಯಂಜಯ ಹೊಸಳ್ಳಿ, ಬಸವರಾಜ ದೇಸಾಯಿ, ಶರಣಪ್ಪ ದೊಡ್ಡಮನಿ ಸೇರಿದಂತೆ ಇತರರಿದ್ದರು.ಡಿಸಿಸಿ ಬ್ಯಾಂಕ್ ಮುಂದೆ ಜನ ನೂಕುನುಗ್ಗಲು:ಬರ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆಯ ಹಣ ಸೇರಿದಂತೆ ಗೃಹಲಕ್ಷ್ಮಿ ಇತರೆ ಯೋಜನೆಗಳ ಸೌಕರ್ಯ ಪಡೆಯಲು ರೈತರು ನಗರದ ಡಿಸಿಸಿ ಬ್ಯಾಂಕ್ ಮುಂದೆ ನೂಕು ನುಗ್ಗಲು ನಡೆಸಿದ್ದಾರೆ. ಕಳೆದ ಎರಡ್ಮೂರು ದಿನದಿಂದ ಮಳೆ ಆಗಿದ್ದರಿಂದ ರೈತರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಖರೀದಿಗೆ ಹಣ ಪಡೆಯಲು ಡಿಸಿಸಿ ಬ್ಯಾಂಕ್‌ಗೆ ಲಗ್ಗೆ ಇಟ್ಟಿದ್ದಾರೆ.